ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ದಕ್ಷ ಹಾಗೂ ಪಾರದರ್ಶಕ ಆಡಳಿತದ ಮೂಲಕ ಮನೆ ಮಾತಾಗಿರುವ ತಮ್ಮ ಸಂಘವು ಫೆಬ್ರವರಿ 25ರಂದು ಶಿರಾಲಿಯಲ್ಲಿ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಸ್ವಂತ ಕಟ್ಟಡವನ್ನು ಸಂಜೆ 5:00 ಗಂಟೆಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತ ಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ ಸ್ವಾಮೀಜಿಯವರು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಸಂಘದ ಘನ ಅಧ್ಯಕ್ಷರಾದ ಅಶೋಕ್ ಶಾಂತರಾಮ್ ಪೈ ಹೇಳಿದರು.

ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು 1999 ರಲ್ಲಿ ಆರಂಭವಾದ ನಮ್ಮ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ 25 ವರ್ಷನ್ನು ಪೂರ್ಣಗೊಳಿಸಿದೆ, ಅಲ್ಲದೆ ಸಂಘವು ಶಿರಾಲಿ, ಭಟ್ಕಳ, ಕುಮಟಾ ಪಟ್ಟಣ ಒಳಗೊಂಡಂತೆ 4 ಶಾಖೆಗಳನ್ನು ಹೊಂದಿದೆ 8653 ಸದಸ್ಯರು 143 ಕೋಟಿ ರೂಪಾಯಿಗೂ ಮಿಕ್ಕಿ ದುಡಿಯುವ ಬಂಡವಾಳದೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ, ಮಾರ್ಚ್2025ರ ಅಂತ್ಯಕ್ಕೆ ಸಂಘವು₹2.50 ಕೋಟಿ ಲಾಭಗಳಿಸಿದೆ. ಕಳೆದ 16 ವರ್ಷಗಳಿಂದ ಸಂಘವು ‘ಅ’ ಶ್ರೇಣಿಯಲ್ಲಿ ಮುಂದುವರೆಯುತ್ತಿದೆ, ಅಲ್ಲದೆ ಪ್ರಾರಂಭವಾದ ಕೇವಲ ಎರಡೇ ವರ್ಷಗಳ ನಂತರ ಸತತ 23 ವರ್ಷಗಳಿಂದ ಸಂಘವು ಸದಸ್ಯರಿಗೆ ಷೇರುಗಳ ಮೇಲೆ ಡಿವಿಡೆಂಟ ನೀಡುತ್ತಾ ಬಂದಿದ್ದು, ಪ್ರಸಕ್ತವಾಗಿ 12% ಡಿವಿಡೆಂಟ್ ವಿತರಿಸುತ್ತಿದೆ.

ನಮ್ಮ ಸಂಘಕ್ಕೆ ಉತ್ತಮ ಸಹಕಾರ ಸಂಘ ಎಂದು 3 ಬಾರಿ ಪ್ರಶಸ್ತಿ ಲಭಿಸಿದೆ ಅಲ್ಲದೆ ಸಂಘದ ಅಧ್ಯಕ್ಷರಿಗೆ ರಾಜ್ಯ ಸರ್ಕಾರವು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ಸಂಘದಲ್ಲಿ 40 ಜನರು ನೇರವಾಗಿ ಹಾಗೂ 50 ಜನರು ಪರೋಕ್ಷವಾಗಿ ಉದ್ಯೋಗ ಪಡೆದು ಜೀವನ ಸಾಗಿಸುತ್ತಿದ್ದಾರೆ.
ಸಂಘವು ಕೂಡಿಟ್ಟ ಕಟ್ಟಡ ನಿಧಿಯಲ್ಲಿ ಚಿತ್ರಾಪುರ ರಸ್ತೆಯ ಪಕ್ಕದಲ್ಲಿರುವ 12 ಗುಂಟೆ ಜಾಗ ಖರೀದಿಸಿ ಮೂರು ಅಂತಸ್ತಿನ ಸ್ವಂತ ಕಟ್ಟಡ ನಿರ್ಮಿಸಿ ಶೇರು ದಾರರ ಶುಭ ಹಾರೈಕೆಯಂತೆ ಈಗಾಗಲೇ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಮಂಕಾಳವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀ ಆರ್. ವಿ. ದೇಶಪಾಂಡೆ, ಕುಮಟಾ ವಿಧಾನಸಭಾಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸುನಿಲ್ ಬಿ. ನಾಯ್ಕ್, ಸಹಕಾರ ಸಂಘಗಳ ಸoಯುಕ್ತ ನಿಬಂಧಕರಾದ ಶ್ರೀ ಕಲ್ಲಪ್ಪ ಓಬಣ್ಣ ಗೋಳ ಸೇರಿದಂತೆ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರೀರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಉಮೇಶ್ ಕಾಮತ್, ನರೇಂದ್ರ ನಾಯಕ್, ನಾಗೇಶ್ ಪೈ, ರವೀಂದ್ರ ಪ್ರಭು, ವಿದ್ಯಾ ಮಹಾಲೆ, ವಾಮನ ಕಾಮತ್, ಅನಂತ್ ಕಾಮತ್, ನಮಿತಾ ಕಾಮತ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ರಾಜೇಂದ್ರ ಶಾನಭಾಗ ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
