ಮುರ್ಡೇಶ್ವರ, ಜುಲೈ ೧೮: ಭಾರತೀಯ ಕೊಂಕಣ ರೈಲ್ವೆ ಯಲ್ಲಿ ಪಾಯಿಂಟ್ಸ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಗಣಪತಿ ನಾಯ್ಕ್ ಅವರು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿಳುತ್ತಿದ್ದ ಸುಮಾರು ೨೨ ವರ್ಷದ ಮೊಹಮ್ಮದ್ ಗಫೂರ್ ಎಂಬ ಯುವಕನ ಪ್ರಾಣವನ್ನು ಸಮಯೋಚಿತವಾಗಿ ರಕ್ಷಿಸಿ ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಯ ಮಾದರಿಯಾಗಿದ್ದಾರೆ.
ಈ ಸಾಹಸಮಯ ಕಾರ್ಯವನ್ನು ಗುರುತಿಸಿ, ಇಂದು ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ವತಿಯಿಂದ ಶ್ರೀ ಗಣಪತಿ ನಾಯ್ಕ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಹಾಗೂ ಆಡಳಿತ ನಿರ್ದೇಶಕರಾದ ಡಾ. ಪುಷ್ಪಲತಾ ವೈದ್ಯ ಅವರು ಶ್ರೀ ಗಣಪತಿ ನಾಯ್ಕ್ ಅವರಿಗೆ ಸನ್ಮಾನಿಸಿ, ಅವರ ಧೈರ್ಯ, ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಸೇವೆಯನ್ನು ಶ್ಲಾಘಿಸಿದರು. ಇಂತಹ ಕಾರ್ಯಗಳು ಸಮಾಜಕ್ಕೆ ಸ್ಪೂರ್ತಿದಾಯಕವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂಬ ಸಂದೇಶವನ್ನು ನೀಡುತ್ತವೆ ಎಂದು ಅವರು ತಮ್ಮ ಅಭಿನಂದನಾ ನುಡಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶ್ರೀ ಗಣಪತಿ ನಾಯ್ಕ್ ಅವರ ಸಾಹಸಮಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವು ಗೌರವಪೂರ್ಣ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.
