ಭಟ್ಕಳ: ಭಟ್ಕಳದ ಪೂರ್ವ ದಿಕ್ಕಿನಲ್ಲಿರುವ ಮೂಢಣಭಟ್ಕಳದ ಗೋಪಿನಾಥ ನದಿಯ ತಟದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಹಾಗೂ ಶ್ರೀ ಕಾಶೀಮಠದ ಯತಿವರ್ಯರ ವೃಂದಾವನಕ್ಕೆ ಭಟ್ಕಳ ಜಿ.ಎಸ್.ಬಿ ಸಮಾಜದ ವತಿಯಿಂದ ವರ್ಷಂಪ್ರತಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸುಮಾರು ೧೬ನೇ ಶತಮಾನದಲ್ಲಿ ನಿರ್ಮಾಣಗೊಂಡ ಪರ್ತಗಾಳಿ ಮಠದ ಪ್ರಥಮ ಯತಿವರ್ಯರಾದ ಶ್ರೀ ನಾರಾಯಣ ತೀರ್ಥರ, ತೃತೀಯ ಯತಿವರ್ಯರಾದ ಶ್ರೀ ಜಿವೋತ್ತಮ ತೀರ್ಥರ ಹಾಗೂ ಶ್ರೀ ಕಾಶೀಮಠದ ಪ್ರಥಮ ಯತಿವರ್ಯರಾದ ಶ್ರೀ ಯಾದವೇಂದ್ರ ತೀರ್ಥರ ವೃಂದಾವನಕ್ಕೆ ಭಜನೆ, ಶ್ರೀ ರಾಮ ನಾಮ ತಾರಕ ಜಪ ಸಹಿತ ಪೂಜಾಕಾರ್ಯವನ್ನು ಕೈಗೊಂಡು ಈ ವರ್ಷದ “ಮನೆ ಮನೆಯಲ್ಲಿ ಭಜನಾ ಕಾರ್ಯ” ಕ್ಕೆ ಚಾಲನೆ ನೀಡಲಾಯಿತು.
ಮನೆ ಮನೆಯಲ್ಲಿ ಭಜನೆ:
೯೦ ರ ದಶಕದಲ್ಲಿ ಸಮಾಜ ಬಾಂಧವರಲ್ಲಿ ಏಕತೆ ಮೂಡಬೇಕು, ಸಂಸ್ಕಾರ-ಸAಸ್ಕೃತಿ-ಸನಾತನದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಬೇಕು ಎನ್ನುವ ಉದ್ದೇಶದಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಂದ್ರ ಶಾನಭಾಗರು ಸಮಾನ ಮನಸ್ಕರೊಡಗೂಡಿ, ಪ್ರತಿ ಆದಿತ್ಯವಾರ ಸಂದ್ಯಾ ಸಮಯದಲ್ಲಿ ಒಂದು ಮನೆಯಲ್ಲಿ ಭಜನಾ ತಂಡವು ತೆರಳಿ ನೆರೆಹೊರೆಯವರೊಡಗೂಡಿ ಭಜನಾ ಕಾರ್ಯವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿದರು. ೩೦ ವರ್ಷಗಳಿಂದ ಇದು ನಿರಂತರವಾಗಿ ಜರುಗುತ್ತಿರುವುದು ವಿಶೇಷ.
ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ನಾಗೇಶ ಕಾಮತ, ಭಜನಾ ಮಂಡಳಿಯ ಉದಯ ಪ್ರಭು, ವರದರಾಜ ಪ್ರಭು, ವಿಠ್ಠಲ ಕಾಮತ, ಜಿ.ಎಸ್.ಎಸ್ ಅಧ್ಯಕ್ಷರಾದ ಗಿರಿಧರ ನಾಯಕ, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಪೈ, ಗೌರವಾಧ್ಯಕ್ಷರಾದ ಗಣಪತಿ ಪ್ರಭು, ನಾಗೇಶ ಪೈ, ಕಿರಣ ಶಾನಭಾಗ, ಕಲ್ಪೇಶ ಪೈ ಸಹಿತ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು. ವೇ.ಮೂ ಸರ್ವೋತ್ತಮ ಭಟ್ ಹಾಗೂ ಅರ್ಚಕರ ತಂಡದವರು ಪೂಜಾಕಾರ್ಯ ನೆರವೇರಿಸಿದರು. ಪ್ರಸಾದ ವಿತರಣೆ ಮಾಡಲಾಯಿತು.
