
ಭಟ್ಕಳ: ದಶಕಗಳ ಕಾಲ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಭಟ್ಕಳದ ಅಂಜುಮನ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಎಸ್. ನಾಯಕ್ ಅವರ ಸೇವಾನಿವೃತ್ತಿಯ ಅಂಗವಾಗಿ ಜಮಾಅತ್-ಎ-ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ವತಿಯಿಂದ ಡಿ. 28ರಂದು ಭಟ್ಕಳದಲ್ಲಿ ಆತ್ಮೀಯ ಸನ್ಮಾನ ಸಮಾರಂಭ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಆರ್.ಎಸ್. ನಾಯಕ್ ಅವರು, ಮನುಷ್ಯ ಮೊದಲು ಮನುಷ್ಯನಾಗಿ ಬದುಕಬೇಕು ಎಂದು ಅಭಿಪ್ರಾಯಪಟ್ಟರು. “ನಾವು ಕೇವಲ ನಮ್ಮ ಧರ್ಮ ಅಥವಾ ಜಾತಿಯ ಚೌಕಟ್ಟಿನಲ್ಲಿ ಸೀಮಿತವಾಗದೆ ಪರಸ್ಪರ ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕಬೇಕು. ಮನುಷ್ಯತ್ವವೇ ಶ್ರೇಷ್ಠ ಮೌಲ್ಯ” ಎಂದು ಹೇಳಿದರು.
ಭಟ್ಕಳದಲ್ಲಿ ಕಳೆದ 25 ವರ್ಷಗಳ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, 1990ರ ದಶಕದಲ್ಲಿ ನಡೆದ ಗಲಭೆ ಮತ್ತು ಕರ್ಫ್ಯೂ ದಿನಗಳನ್ನು ಸ್ಮರಿಸಿದರು. “ಗಲಭೆಯ ಸಮಯದಲ್ಲಿ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಅಪಾರ ಸಂಕಷ್ಟ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ಸದ್ಭಾವನೆಯ ಕಾರ್ಯಗಳು ಅಗತ್ಯ” ಎಂದು ಹೇಳಿದರು. ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿ ಮತ್ತು ಸಹಬಾಳ್ವೆಯ ಸೇತುವೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಧರ್ಮಗಳ ಅರ್ಥೈಸಿಕೆ ಅಗತ್ಯವಿದೆ ಎಂದು ಅವರು ಹೇಳಿದರು. “ನಾವು ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ಅಪ್‌ಡೇಟ್ ಮಾಡುವಂತೆ, ಧರ್ಮಗಳನ್ನೂ ಕಾಲಕ್ಕೆ ತಕ್ಕಂತೆ ಧನಾತ್ಮಕವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮೂಲಭೂತವಾದ ಮತ್ತು ದ್ವೇಷದಂತಹ ಪ್ರವೃತ್ತಿಗಳು ಬೆಳೆದುಕೊಳ್ಳುತ್ತವೆ” ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತ್-ಎ-ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ., ಲೇಖನಿಯ ಮೂಲಕ ವಿಮರ್ಶೆ, ಬದುಕಿನ ಮೂಲಕ ಸೌಹಾರ್ದತೆ ಸಾರಿದ ಪ್ರೊ. ಆರ್.ಎಸ್. ನಾಯಕ್ ಅವರ ಬದುಕು ಮನುಷ್ಯತ್ವದ ಪಾಠವನ್ನು ಸಾರುವ ತೆರೆದ ಪುಸ್ತಕದಂತಿದೆ. ಅವರು ಕೇವಲ ಅಕ್ಷರಗಳನ್ನು ಕಲಿಸಲಿಲ್ಲ, ಬದಲಾಗಿ ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಬಿತ್ತುವ ಕಾರ್ಯವನ್ನು ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಭಾವನಾ ಮಂಚ್ ನ ಕಾರ್ಯದರ್ಶಿ ಮುಹಮ್ಮದ್ ರಝಾ ಮಾನ್ವಿ, ಪ್ರೊ. ನಾಯಕ್ ಅವರು ಕೇವಲ ಕನ್ನಡದ ಅಧ್ಯಾಪಕರಲ್ಲ, ಸಮಾಜದ ಗುರು ಎಂದು ಶ್ಲಾಘಿಸಿದರು. ಸಾಹಿತ್ಯ ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಅವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸ್ಥಾನ ಪಡೆದಿರುವುದು ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸದ್ಭಾವನಾ ಮಂಚ್ ಪದಾಧಿಕಾರಿ ಗಂಗಾಧರ್ ನಾಯ್ಕ ಮಾತನಾಡಿ, “ಪ್ರೊ. ನಾಯಕ್ ಅವರು ಜ್ಞಾನವನ್ನು ಎಂದಿಗೂ ಅಹಂಕಾರದ ಆಭರಣವಾಗಿ ಬಳಸಿಕೊಳ್ಳಲಿಲ್ಲ. ಅವರ ಸರಳತೆ ಮತ್ತು ಡೌನ್ ಟು ಅರ್ಥ್ ಸ್ವಭಾವ ಅನೇಕರಿಗೆ ಪ್ರೇರಣೆಯಾಗಿದೆ” ಎಂದು ಗುಣಗಾನ ಮಾಡಿದರು,.
ಕಾರ್ಯದರ್ಶಿ ಪ್ರೋ.ರವೂಫ್ ಆಹಮದ್ ಸವಣೂರು ಕಾಯರ್ಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ನ ಪದಾಧಿಕಾರಿಗಳು, ಹಾಗೂ ಸದ್ಭಾವನಾ ಮಂಚ್‌ನ ಪದಾಧಿಕಾರಿಗಳು, ಅಂಜುಮನ್ ಕಾಲೇಜಿನ ಸಹೋದ್ಯೋಗಿಗಳು, ಸ್ಥಳೀಯ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
