
ಭಟ್ಕಳ: ಇಲ್ಲಿಯ ಚನ್ನಪಟ್ಟಣದ ಹನುಮಂತ ದೇವಸ್ಥಾನದ ಬಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ವಾರ್ಷಿಕೋತ್ಸವ ಅತ್ಯಂತ ಆದ್ದೂರಿಯಾಗಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಲೆಕ್ಕಪರಿಶೋಧಕ, ಶಾಲೆಯ ಹಳೆ ವಿದ್ಯಾರ್ಥಿ ಶ್ರೀಧರ ಆಚಾರ್ಯ ಮಾತನಾಡಿ ಪ್ರಾಥಮಿಕ ಶಾಲಾ ಹಂತವು ಶೈಕ್ಷಣಿಕ ಬದುಕನ್ನು ರೂಪಿಸುವಂತಹ ಹಂತವಾಗಿದೆ. ಈ ಹಂತದಲ್ಲಿನ ಶಾಲೆ ಮತ್ತು ಶಿಕ್ಷಕರೊಂದಿಗಿನ ಅನುಭಂದವು ಜೀವನ ಪೂರ್ತಿ ನೆನಪಿಡುವಂತದ್ದಾಗಿದೆ. ವಿದ್ಯಾರ್ಥಿಗಳು ಕೀಳರಿಮೆಯನ್ನು ಬಿಟ್ಟು ಓದುವುದನ್ನು ತಪಾಸ್ಸನ್ನಾಗಿ ಮಾಡಿಕೊಂಡು ಸಾಧನೆಯನ್ನು ಮಾಡಬೇಕು. ಬದುಕಿನಲ್ಲಿ ಯಶಸ್ಸುಗಳಿಸಿದ ನಂತರ ನಾವು ಕಲಿತ ಶಾಲೆಗೆ ನಮ್ಮಿಂದಾದ ಸೇವೆಯನ್ನು ಸಲ್ಲಿಸಬೇಕು ಎಂದು ನುಡಿದರು. ನಾಗಯಕ್ಷೆ ಮಹಾಸತಿ ದೇವಸ್ಥಾನದ ಧರ್ಮದರ್ಶಿಗಳಾದ ರಾಮದಾಸ್ ಪ್ರಭು ವಿದ್ಯಾರ್ಥಿಗಳ ಕಥೆ,ಕವಿತೆ, ಲೇಖನಗಳನ್ನು ಒಳಗೊಂಡ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಶಾಲೆಯಲ್ಲಿ ಉತ್ತಮ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಗೆ ಸಂಸ್ಕಾರವನ್ನು, ದೇಶಭಕ್ತಿಯನ್ನು ರೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಸಿ ಆರ್ ಪಿ ಗೋಪಾಲ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ ಬಡಾಲ್, ಕಿರಣ್ ಚಂದಾವರ, ಎಸ್ ಡಿ ಎಮ್ ಸಿ ಅಧ್ಯಕ್ಷ ರಾಮಚಂದ್ರ ದೇವಾಡಿಗ, ಉಪಾಧ್ಯಕ್ಷೆ ಪಾರ್ವತಿ ನಾಯ್ಕ, ಎಸ್. ಡಿ.ಎಮ್. ಸಿ. ನಿಕಟಪೂರ್ವ ಅಧ್ಯಕ್ಷ ಹರೀಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಒಂದರಿಂದ ಏಳನೇ ತರಗತಿಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ, ಮತ್ತು ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನವನ್ನು ವಿತರಿಸಲಾಯಿತು.
ಶಾಲಾ ಮುಖ್ಯಾಧ್ಯಾಪಕ ಜನಾರ್ಧನ ಮೊಗೇರ್ ಕಾರ್ಯಕ್ರಮವನ್ನು ನಿರೂಪಿಸುವುದರ ಜೊತೆಗೆ ಎಲ್ಲರನ್ನೂ ಸ್ವಾಗತಿಸಿ ಪ್ರಾಥಮಿಕ ನುಡಿಗಳನ್ನಾಡಿದರು. ಶಿಕ್ಷಕಿ ದೀಪಾ ಗೌಡ ವರದಿಯನ್ನು ವಾಚಿಸಿದರು. ಶಿಕ್ಷಕರಾದ ರಾಧಾ ದೇವಾಡಿಗ, ಚೈತ್ರ ನಾಯ್ಕ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ಜಾನಕಿ ದೇವಾಡಿಗ ವಂದಿಸಿದರು . ಕಾರ್ಯಕ್ರಮದಲ್ಲಿ ಗಣಪತಿ ಭಟ್, ನಾಗರಾಜ ದೇವಾಡಿಗ, ಅಶ್ವಿನಿ ನಾಯ್ಕ, ನಾಗೇಂದ್ರ ಆಚಾರ್ಯ, ಮೋಹನ ನಾಯ್ಕ, ವಿದ್ಯಾರ್ಥಿಗಳು, ಪಾಲಕರು, ಎಸ್. ಡಿ. ಎಂ. ಸಿ. ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ವೈವಿದ್ಯಮಯ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಮೂಡಿಬಂದು ಎಲ್ಲರ ಮನಸೊರೆಗೊಂಡಿತಲ್ಲದೇ ವಿದ್ಯಾರ್ಥಿಗಳೇ ಕಾರ್ಯಕ್ರಮ ವನ್ನು ನಿರೂಪಿಸಿದ್ದು ವಿಶೇಷವಾಗಿತ್ತು.
