ಭವ್ಯ ಸ್ವಾಗತ ಪಡೆದ ಹಿಮಾಲಯದ ಬದರಿಕಾಶ್ರಮದಿಂದ ಪ್ರಾರಂಭಗೊಂಡ ಪರ್ತಗಾಳಿ ಮಠದ ಶ್ರೀ ರಾಮ ದಿಗ್ವಿಜಯ ರಥ

Share


ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ 550 ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡ 550 ಕೋಟಿ ಶ್ರೀರಾಮ ಜಪ ಯಜ್ಞ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದರ ಅಂಗವಾಗಿ ಹೊರಟ ಶ್ರೀ ಮಠದ ಶ್ರೀರಾಮ ದಿಗ್ವಿಜಯ ರಥಯಾತ್ರೆಯು ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿ ಶನಿವಾರ ಭಟ್ಕಳ ತಾಲೂಕಿಗೆ ಆಗಮಿಸಿತು.


ಭಕ್ತ ಸಮೂಹದ ಹರ್ಷೋದ್ಧಾರದ ಜಯಘೋಷ ದೊಂದಿಗೆ ರಥವನ್ನು ಬರಮಾಡಿಕೊಳ್ಳಲಾಯಿತು. ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮಠದ ಬಳಿ ಆಗಮಿಸಿದ ಭವ್ಯರಥವನ್ನು ಅದ್ದೂರಿ ಸ್ವಾಗತದೊಂದಿಗೆ ಪುಷ್ಪಾಂಜಲಿ ಸರ್ಕಲ್ ಬಳಿಯಿಂದ ಒಡೆಯರ್ ಮಠದತ್ತ ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ವಡೇರಮಠದಲ್ಲಿ ಶ್ರೀ ರಾಮ ರಥಕ್ಕೆ ಪೂಜೆ ಸಲ್ಲಿಸಿ ರಥಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಯಿತು. ಭಟ್ಕಳ ತಾಲೂಕಿನಲ್ಲಿರುವ ಎಂಟು ಜಪ ಕೇಂದ್ರ ಗಳಿಗೂ ಈ ರಥವು ತೆರಳಿ ಪೂಜೆಗಳನ್ನು ಸ್ವೀಕರಿಸಲಿದೆ. ಭಾನುವಾರ ಬೆಳಿಗ್ಗೆ ರಥವು ತಿರುಮಲ ದೇವಸ್ಥಾನ, ಕಾಮಾಕ್ಷಿ ದೇವಸ್ಥಾನ, ನಂತರ ರಘುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಪೂಜೆ ಸ್ವೀಕರಿಸಿ ಬಳಿಕ ವೆಂಕಟಾಪುರ, ಶಿರಾಲಿ, ಅಳವೆಕೊಡಿ, ಮುರುಡೇಶ್ವರ ನಂತರ ಜಪಕೇಂದ್ರ ಮಂಕಿಗೆ ತೆರಳಲಿದೆ.


ಶನಿವಾರ ರಾತ್ರಿ 8:00ಗಂಟೆಯಿಂದ ರಾಮಲೀಲಾ ಕಥಾ, ಝೇಂಕಾರ ತಂಡದಿಂದ ಭರತನಾಟ್ಯ, ಸೌಮ್ಯ ಹಾಗೂ ಯುವಕರ ರಿತಿಕಾ ಕಿಣಿ ಸಂಗಡಿಗರಿಂದ ರಾಮನ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು. ಸಾಂಪ್ರದಾಯಿಕ ಉಡುಗೆ, ಭಜನೆಯೊಂದಿಗೆ ರಥಾರೂಢ ಮಾರುತಿ ಲಕ್ಷ್ಮಣ ಸಹಿತ ಶ್ರೀ ಸೀತಾಪತಿ ರಾಮಚಂದ್ರರ ಮೆರವಣಿಗೆ ಪಟ್ಟಣದಲ್ಲಿ ವಿಶೇಷಕಳೆ ತಂದಿದೆ.

ಪಟ್ಟಣದ ವಡೇರಮಠದ ಬಳಿಯಲ್ಲಿ ಹಬ್ಬದ ವಾತವರಣ ಸೃಷಿಯಾಗಿದ್ದು ಶ್ರೀ ರಾಮ ದಿಗ್ವಿಜಯ ರಥದ ಸ್ವಾಗತಕ್ಕೆ ಭಟ್ಕಳದ ಜನತೆ ಅಭೂತ ಪೂರ್ವ ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಗಿಂಡಿ ನೃತ್ಯ, ಭಜನೆ, ಕೀರ್ತನೆ, ಪುಟ್ಟ ಮಕ್ಕಳ ಸಹಿತರಾಗಿ ರಾಮ ಲಕ್ಷಣ ಹನುಮಂತ ದೇವರ ಉಡುಗೆತೊಡುಗೆಯ ಟ್ಯಾಬ್ಲೊಗಳು ಆಕರ್ಷಕವಾಗಿತ್ತು. ನಂತರ ನಡೆದ ಸುಡುಮದ್ದು ಪ್ರದರ್ಶನವಂತು ಜನರನ್ನು ತಮ್ಮತ್ತ ಸೆಳೆದಿಟ್ಟು ಕೊಂಡಿದೆ.


ರಾತ್ರಿ ಶ್ರೀ ರಾಮದೇವರ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ಸೇವೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಭಟ್ಕಳ ಮಾತ್ರವಲ್ಲದೆ ಶಿರಾಲಿ ಮುರ್ಡೇಶ್ವರದಿಂದಲೂ ಸಮಾಜ ಬಾಂಧವರು ಆಗಮಿಸಿ ಈ ಸಂತಸದ ಕ್ಷಣವನ್ನು ಕಣ್ತುಂಬಿ ಕೊಂಡಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!