ಭಟ್ಕಳ: “ಐಎನ್‌ಎಫ್ ಲಾಂಚ್‌ಪ್ಯಾಡ್ 2025” ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ವೃತ್ತಿ ಅರಿವು ಮತ್ತು ನಾಯಕತ್ವದ ಜಾಗೃತಿ ಮೂಡಿಸಿದ ಶಿಬಿರ

Share

ಭಟ್ಕಳ :ಭಾರತೀಯ ನವಾಯತ್ ಫೋರಂ (INF) ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಒಂದು ದಿನದ ವೃತ್ತಿ ಮತ್ತು ನಾಯಕತ್ವ ಶಿಬಿರ “INF Launchpad 2025” ಗುರುವಾರ ಭಟ್ಕಳದ ಅಮೀನಾ ಪ್ಯಾಲೇಸ್‌ನಲ್ಲಿ ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಈ ಶಿಬಿರದಲ್ಲಿ ಭಟ್ಕಳದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಶಿಬಿರದ ಉದ್ದೇಶ ವಿದ್ಯಾರ್ಥಿಗಳಿಗೆ ಭವಿಷ್ಯದ ವೃತ್ತಿ ಆಯ್ಕೆಗಳಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನ
ನೀಡುವುದು ಎಂದು INF ಅಧ್ಯಕ್ಷ ಅಫ್ತಾಬ್ ಹುಸೇನ್ ಕೋಲಾ ಹೇಳಿದರು. “ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಗುರಿಗಳನ್ನು ಸರಿಯಾಗಿ ಗುರುತಿಸಿದಾಗ ಮಾತ್ರ ಯಶಸ್ಸಿನ ದಾರಿ ಸುಗಮವಾಗುತ್ತದೆ,” ಎಂದು ಅವರು ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರದಲ್ಲಿ ಬೆಂಗಳೂರಿನ ಪ್ರಸಿದ್ಧ ವೃತ್ತಿ ಸಲಹೆಗಾರ ಮತ್ತು ಸಿಗ್ಮಾ ಸಂಸ್ಥೆಯ ಸಂಸ್ಥಾಪಕ ಅಮೀನ್-ಇ-ಮುದಸ್ಸರ್
“Career Compass – Navigating Your Future” ವಿಷಯದ ಮೇಲೆ ಪ್ರಭಾವಿ ಅಧಿವೇಶನ ನಡೆಸಿ, ವಿದ್ಯಾರ್ಥಿಗಳಿಗೆ
ಭವಿಷ್ಯದ ಉದ್ಯೋಗಾವಕಾಶಗಳು, ಹೊಸ ತಲೆಮಾರಿನ ವೃತ್ತಿಗಳು ಹಾಗೂ ತಮಗೆ ತಕ್ಕ ಆಯ್ಕೆಗಳನ್ನು ಹೇಗೆ
ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಕೇರಳದ ಅನುಭವಾಧಾರಿತ ಶಿಕ್ಷಣ ಹಾಗೂ ನಾಯಕತ್ವ ತರಬೇತಿ ತಜ್ಞ ಸುಹೈಲ್ ಬಾಬು, ಸಂವಹನ, ತಂಡದ ಕೆಲಸ, ಸಮಯ ನಿರ್ವಹಣೆ ಮತ್ತು ನಾಯಕತ್ವದ ಕೌಶಲ್ಯಗಳ ಕುರಿತು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ಸಾಹ ತೋರಿದರು.
ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪರಿಚಯ ಅಧಿವೇಶನ ನಡೆಯಿತು. JEE, NEET, CET, UPSC, CLAT ಮುಂತಾದ ಪ್ರಮುಖ ಪರೀಕ್ಷೆಗಳ ಕುರಿತು ಮಾಹಿತಿ ನೀಡಲಾಗಿದ್ದು, ಪರೀಕ್ಷಾ ಮಾದರಿ ಮತ್ತು ತಯಾರಿ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ನೀಡಲಾಯಿತು.
“ವಿದ್ಯಾರ್ಥಿವೇತನ ಮಾರ್ಗದಶಿ” ಅಧಿವೇಶನದಲ್ಲಿ ಭಟ್ಕಳ ತಾಲೂಕು ಅಲ್ಪಸಂಖ್ಯಾತ ವಿಸ್ತರಣಾಧಿಕಾರಿ ಶಮ್ಸುದ್ದೀನ್ ಶೈಖ್, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ರಾಜ್ಯ ಹಾಗೂ ಕೇಂದ್ರ ಸೇವೆಗಳ ಸಿವಿಲ್ ಸರ್ವಿಸ್ ಪರೀಕ್ಷೆಗಳ ಕುರಿತು ಪ್ರಾಥಮಿಕ ಮಾರ್ಗದರ್ಶನ ನೀಡುವ ವಿಶೇಷ ಅಧಿವೇಶನವೂ ಜರುಗಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಜಿಎಸ್‌ಟಿ ಉಪ ಆಯುಕ್ತ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಪುಸ್ತಕಗಳ ಲೇಖಕ ಮುಹಮ್ಮದ್ ರಫಿ ಪಾಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ “ಸಾಧನೆಗೆ ಕಠಿಣ ಪರಿಶ್ರಮ ಮತ್ತು ನಿಷ್ಠೆ ಅಗತ್ಯ” ಎಂದು ಪ್ರೇರಣಾದಾಯಕ ಭಾಷಣ ಮಾಡಿದರು.
ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಾಲಿಮ್ ಕೋಲಾ ಮತ್ತು ತನ್ವೀರ್ ಮೊಟಿಯಾ ಸಂಯೋಜಕರಾಗಿ ಪ್ರಮುಖ ಪಾತ್ರವಹಿಸಿದರು.

Leave a Reply

Your email address will not be published. Required fields are marked *

error: Content is protected !!