
ಭಟ್ಕಳ: ತಾಲೂಕಿನ ತೆಂಗಿನಗುಂಡಿ ಮೀನುಗಾರಿಕಾ ಬಂದರಲ್ಲಿ ಕಾಂಕ್ರೀಟ್ ಫ್ಲಾಟ್ಫಾರ್ಮ್ ಕುಸಿದು ಸಮಸ್ಯೆಯಾಗಿತ್ತು. ಫ್ಲಾಟ್ಫಾರ್ಮ್ ಮತ್ತಷ್ಟು ಕುಸಿಯದಂತೆ ಮತ್ತು ಮುಂದಿನ ದಿನಗಳಲ್ಲಿಯೂ ಸಮಸ್ಯೆ ಆಗಬಾರದು ಎಂದು ನಿರ್ಧರಿಸಿ 9.5 ಕೋಟಿ ವೆಚ್ಚದಲ್ಲಿ ಡಯಾಫ್ರಮ್ ವಾಲ್ ನಿರ್ಮಾಣಕ್ಕೆ ಮುಂದಾಗಿದ್ದು ಇಂದು ಭೂಮಿ ಪೂಜೆ ಮಾಡುವ ಮೂಲಕ ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು ಮೀನುಗಾರರ ಬದುಕು ಸಹ ಸಮುದ್ರದ ಮುಳುಗೇಳುವ ತೆರೆಯಂತೆ ಆಗಿದೆ. ಆಳ ಸಮುದ್ರಕ್ಕಿಳಿದು ಮೀನುಗಾರಿಕೆ ನಡೆಸುವವರಿಗೆ ಸಿಕ್ಕರೆ ಶಿಕಾರಿ ಇಲ್ದಿದ್ರೆ ಬಿಕಾರಿ ಎನ್ನುವ ಅನಿಶ್ಚಿತ ದುಡಿಮೆಯನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಅನ್ನದ ಮೂಲವಾಗಿರುವ ಮೀನುಗಾರಿಕೆಗೆ ಉತ್ತೇಜನ ನೀಡುವುದು ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ನಮ್ಮ ಸರ್ಕಾರದ ಜವಾಬ್ಧಾರಿಯ ಜೊತೆಗೆ ನನ್ನ ಬದ್ಧತೆಯೂ ಆಗಿದೆ ಎಂದರು.

ಮೀನುಗಾರಿಕೆ ಸಚಿವನಾಗಿ ಮೀನುಗಾರರ ಕಷ್ಟಗಳಿಗೆ ಸ್ಪಂದಿಸುವುದು ನನ್ನ ಆಧ್ಯಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಅಳ್ವೆಕೋಡಿ ಬಂದರನ್ನು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎನ್ನುವ ಸಂಗತಿಯನ್ನು ನಮ್ಮೆಲ್ಲ ಮೀನುಗಾರರ ಗಮನಕ್ಕೆ ಈ ಮೂಲಕ ತರಲು ಇಚ್ಚಿಸುತ್ತೇನೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮೀನುಗಾರರು ಹಾಗೂ ಸ್ಥಳೀಯ ಮುಖಂಡರು ಸಚಿವರನ್ನು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಶಂಕರ್ ಹೆಬ್ಳೆ ಪರಮೇಶ್ವರ ದೇವಾಡಿ ವೆಂಕಟರಮಣ ಮೊಗೇರ್ ಹಾಗೂ ಸ್ಥಳೀಯ ಮೀನುಗಾರ ಮುಖಂಡರು, ಮೀನುಗಾರ ಮಹಿಳೆಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಉಲ್ಲಾಸ್ ಶಾನ್ಭಾಗ್