
ಪತ್ರಕರ್ತೆಯಾದ ರಾಧಾ ಹಿರೇಗೌಡರ್ ಅವರಿಗೆ ಕಾಂಗ್ರೆಸ್ ಹಿರಿಯ ಮುಖಂಡರಾದ ಆರ್ ವಿ ದೇಶಪಾಂಡೆ ಅವರು ಸಾರ್ವಜನಿಕವಾಗಿ ಅವಮಾನಿಸಿದ್ದು ಇದು ಕೇವಲ ಅವರಿಗೆ ಮಾತ್ರವಲ್ಲ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಬಿಜೆಪಿಯ ಉತ್ತರಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಶಿವಾನಿ ಶಾಂತರಾಮ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ರಾಧಾ ಹಿರೇಗೌಡರ ಅವರು ಸಹಜವಾಗಿಯೇ ಪ್ರಶ್ನೆ ಕೇಳಿದ್ದಾರೆ, ಇದಕ್ಕೆ ಆರ್ವಿಡಿಯವರು ಉತ್ತರಿಸುವ ಭರದಲ್ಲಿ ರಾಜ್ಯದ ಓರ್ವ ಹಿರಿಯ ರಾಜಕೀಯ ಮುತ್ಸದ್ದಿಯಾಗಿ, ಹಲವಾರು ವರ್ಷಗಳ ಕಾಲ ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಪ್ರಸ್ತುತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಆರ್. ವಿ.ದೇಶಪಾಂಡೆಯವರು ತಾಯ್ತನ ಹಾಗೂ ಹೆರಿಗೆಗೆ ಸಂಬಂಧಿಸಿದ ವಿಷಯವಾಗಿ ಹಾವ-ಭಾವ ತೋರಿಸುತ್ತಾ ಉತ್ತರಿಸಿದ ರೀತಿ ರಾಧಾ ಅವರಿಗೆ ಮಾತ್ರವಲ್ಲ ಸಂಪೂರ್ಣ ಮಾತೃ ಸಮಾಜಕ್ಕೆ ಮಾಡಿದ ಅವಮಾನ ಎಂದು ಶಿವಾನಿ ಶಾಂತರಾಮ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಾಯಕರು ಮಾತು ಎತ್ತಿದರೆ ಮಹಿಳಾ ಸಬಲೀಕರಣ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ ಆದರೆ ಮಹಿಳೆಯರಿಗೆ ಗೌರವ ನೀಡುವ ಎಳ್ಳಷ್ಟು ಸೌಜನ್ಯ ಇನ್ನೂ ಬೆಳೆಸಿಕೊಂಡಿಲ್ಲ ಪತ್ರಕರ್ತೆ ಒಬ್ಬರಿಗೆ ಬೇಜವಾಬ್ದಾರಿಯಿಂದ ಮಾತನಾಡಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್. ವಿ. ದೇಶಪಾಂಡೆ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿಯ ಉತ್ತರಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಶಿವಾನಿ ಶಾಂತರಾಮ್ ಆಗ್ರಹಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.