ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅಲ್ಲಿಯ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತೇಜೋವಧೆಯನ್ನು ವಿರೋಧಿಸಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರದಂದು ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ ‘ನಮ್ಮ ಶೃದಾ ಕೇಂದ್ರಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅದರಲ್ಲೂ ಈಗ ಧರ್ಮಸ್ಥಳದ ದೇವಸ್ಥಾನದ ಬಗ್ಗೆ ಯಾವ ರೀತಿಯ ಅಪಚಾರ ಮಾಡುವ ಕೆಲಸ ಒಂದು ತಂಡದಿಂದ ಯಾವ ರೀತಿ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು ಇದು ಖಂಡನೀಯವಾಗಿದೆ.
ಇವತ್ತು ಯಾವ ಮಟ್ಟಿಗೆ ಹೋಗಿದ್ದಾರೆ ಎಂದರೆ ಆ ಶ್ರದ್ಧಾ ಕೇಂದ್ರವನ್ನು ಸಂಪೂರ್ಣವಾಗಿ ಮುಗಿಸುವ ಉದ್ದೇಶದಿಂದ ತಂಡವನ್ನು ಕಟ್ಟಿಕೊಂಡು ತಿಮ್ಮರೊಡ್ಡಿ ಗ್ಯಾಂಗ್ ಮತ್ತು ಕೇರಳ ಸರ್ಕಾರದಿಂದ ಪಡಿಂಗ್ ಆಗುತ್ತದೆ ಹಾಗೂ ಇದಕ್ಕೆ ಈ ಹಿಂದೆ ಇಲ್ಲಿ ಡಿಸಿಯಾಗಿದ್ದ ಈಗ ತಮಿಳುನಾಡಿನ ಸಂಸದರಾಗಿರುವ ಶಿಂಥೇಲ್ ಅವರು ಇದಕ್ಕೆ ಸಂಪೂರ್ಣ ಮಾನಿಟರಿಂಗ್ ಮಾಡುತ್ತಿರುವವರಾಗಿದ್ದಾರೆ.
ಬೇರೆ ರಾಜ್ಯದ ವ್ಯಕ್ತಿ ಧರ್ಮಸ್ಥಳದ ಮೇಲೆ ಕರಿನೆರಳು ಉಂಟಾಗುವಂತೆ ಮಾಡುತ್ತಿರುವುದು ಖಂಡನೀಯ. ಯಾವ ರೀತಿ ಎಂದರೆ ಸರಕಾರ ಎಸ್ಐಟಿ ರಚನೆ ಮಾಡಿ 13 ಗುಂಡಿಯನ್ನು ತೆಗೆಯುವ ಕೆಲಸವಾಯಿತು.
ನಾನು ಎಸ್ಐಟಿಯನ್ನು ದೂಷಣೆ ಮಾಡುತ್ತಿಲ್ಲ. ಧರ್ಮಸ್ಥಳದ ಪವಿತ್ರತೆಯನ್ನು ಹಾಳು ಮಾಡುವ ದೃಷ್ಟಿಯಿಂದ ಧರ್ಮಸ್ಥಳವು ವೀರೇಂದ್ರ ಹೆಗಡೆಯವರ ರಕ್ಷಣೆಯಲ್ಲಿ ಯಾವ ರೀತಿ ಧರ್ಮದ ಧಾರ್ಮಿಕ ಕಾರ್ಯವನ್ನು ಮಾಡುತ್ತಿದೆ ಎಂಬುದು ತಮಗೆಲ್ಲರಿಗೂ ಗೊತ್ತಿದೆ. ಧರ್ಮಸ್ಥಳ ಅನ್ನದಾಸೋಹ ಆಗಿರಬಹುದು ಹಾಗೂ ರಾಜ್ಯದ ಸುಮಾರು 40 ಸಾವಿರ ಜನರಿಗೆ ಉದ್ಯೋಗವನ್ನು ನೀಡಿರುತ್ತದೆ. ಎಷ್ಟೋ ಸಮಸ್ಯೆಗಳಿಗೆ ಧರ್ಮಸ್ಥಳದಲ್ಲಿ ಪರಿಹಾರ ಸಿಗುತ್ತದೆ ಕೋರ್ಟ್ ನಲ್ಲಿ ಆಗದೇ ಇರುವಂತಹ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುತ್ತದೆ.
ಇವತ್ತು ನಾನು ನೇರವಾಗಿ ಸರ್ಕಾರವನ್ನು ಆಪಾದನೆ ಮಾಡುತ್ತೇನೆ. ನಮ್ಮ ಬೇಡಿಕೆಯೇನೆಂದರೆ ಧರ್ಮ ಕ್ಷೇತ್ರಕ್ಕೆ ನ್ಯಾಯ ಸಿಗಬೇಕು ಇವತ್ತು ಆ ಕ್ಷೇತ್ರದಲ್ಲಿ ಹಿಂದೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅಲ್ಲಿ ನ್ಯಾಯ ಸಿಗಬೇಕು ಎಂದು ಭಾರತೀಯ ಜನತಾ ಪಾರ್ಟಿ ಹಾಗೂ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ನವರು ಒಂದು ದಿನವೂ ಧರ್ಮಸ್ಥಳಕ್ಕೆ ಭೇಟಿ ಕೊಡೋ ಕಾರ್ಯಕ್ರಮ ಮಾಡಿಲ್ಲ.
ನಾನು ಸೌಜನ್ಯಗೆ ನ್ಯಾಯ ಸಿಗಬೇಕೆಂದು ವಿನಂತಿ ಮಾಡುತ್ತೇನೆ ನ್ಯಾಯ ಸಿಗುವಂತ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಅಪಚಾರ ಮಾಡುವಂತಹ ಇಂತಹ ತಿಮರೋಡಿಯಂತಹ ವ್ಯಕ್ತಿ ಮಾಡುತ್ತಿರುವುದು ತಪ್ಪು.
ನಂತರ ಬಿಜೆಪಿ ಪ್ರಮುಖ, ಜೈನ ಸಮುದಾಯದ ಪ್ರಮುಖ, ನ್ಯಾಯವಾದಿ ಧನ್ಯಕುಮಾರ ಜೈನ ಮಾತನಾಡಿ ‘ಹಿಂದೂಗಳ ಶ್ರದ್ದಾ ಕೇಂದ್ರವಾದ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಹಾಗೂ ಕೂಡಲೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು.
ಮುಖ್ಯಮಂತ್ರಿಗಳು ಧರ್ಮಸ್ಥಳದಲ್ಲಿ ಬುರುಡೆ ತಂದ ವ್ಯಕ್ತಿ ಶವ ಹೂತಿದ್ದಾನೆ ಎಂಬ ಬಗ್ಗೆ ಆತನ ಬಗ್ಗೆ ಯಾವುದೇ ಪೂರ್ವಾಪರ ಮಾಹಿತಿ ಯನ್ನು ಅಲ್ಲದೇ ತನಿಖೆ ಗೊಳಪಡಿಸದೇ ಏಕಾಏಕಿ ಧರ್ಮಸ್ಥಳ ಪ್ರಕರಣವನ್ನು ಎಸ್.ಐ.ಟಿ.ಗೆ ವಹಿಸಿದ್ದು ಇರುತ್ತದೆ. ಇದರಿಂದ ಹಿಂದೂ ಧರ್ಮದ ಶೃಧ್ಧಾ ಕೇಂದ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುಧ್ಧ ಪಿತೂರಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಧರ್ಮದ ದೇವಸ್ಥಾನಗಳ ಬಗ್ಗೆ ಹಸ್ತಕ್ಷೇಪ ಮಾಡುತ್ತಿದೆ ಎಂದ ಅವರು ಅನಾದಿ ಕಾಲದಿಂದಲೂ ಹಿಂದೂಗಳ ಶೃದ್ಧಾಕೇಂದ್ರವಾದ ಶ್ರೀ ಮಂಜುನಾಥ ಸ್ವಾಮಿಯ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಕುಟುಂಬದ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ಮಾಡಿಕೊಂಡು ಕ್ಷೇತ್ರದ ಹೆಸರನ್ನು ಹಾಳು ಮಾಡುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ನಿರತರಾಗಿದ್ದಾರೆ.
ನಾವು ಶ್ರೀ ಕ್ಷೇತ್ರದ ಭಕ್ತರಾಗಿದ್ದು ನಮ್ಮ ತಲೆಮಾರುಗಳ ಹಿಂದಿನಿಂದ ಕ್ಷೇತ್ರದ ಭಕ್ತರಾಗಿ ನಡೆದುಕೊಂಡು ಬರುತ್ತಿದ್ದೇವೆ.
ಧರ್ಮಸ್ಥಳ ಕ್ಷೇತ್ರದಿಂದ ಕಳೆದ ಕೆಲವು ದಶಕಗಳಿಂದ ಅನೇಕ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ಒಂದು ಸರ್ಕಾರದ ರೀತಿಯಲ್ಲಿ ಕ್ಷೇತ್ರವು ಜನಸಾಮಾನ್ಯರಿಗೆ ನೆರವು ನೀಡುವಂತಹ ಕೆಲಸವನ್ನು ಮಾಡುತ್ತಿದೆ.
ಅದೇ ರೀತಿ ಕರ್ನಾಟಕದ ತುಂಬೆಲ್ಲಾ ಅನೇಕ ದೇವಸ್ಥಾನಗಳು, ಬಸದಿಗಳು, ರುದ್ರಭೂಮಿಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಶ್ರೀ ಕ್ಷೇತ್ರವು ಮಾಡಿಕೊಂಡು ಬಂದಿದೆ.
ಯೂಟ್ಯೂಬರ್ ಸಮೀರ, ತಿಮರೋಡಿ, ಗಿರೀಶ ಮಟ್ಟೆನನವರ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರ ವಿರುಧ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತಾಧಿಗಳನ್ನು ಹೊಂದಿರುತ್ತದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ. ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿರುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಹಾಗೂ ಎಡಚರರು ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಹಿಂದೂಗಳ ಶ್ರದ್ಧಾ ಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ. ಇಂತಹ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರ್ಯವು ನಡೆದಿದೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಆತ ಹೇಳಿದ ಕಡೆಗಳೆಲ್ಲೆಲ್ಲಾ ಗುಂಡಿಗಳನ್ನು ತೋಡಿದೆ. ಆದರೆ, ಈ ಅನಾಮಿಕನ ಹಿಂದಿರುವ ದುಷ್ಕ ವ್ಯಕ್ತಿಗಳು ಯಾರು.? ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ತಿಳಿಸಿರುವುದಿಲ್ಲ. ಆದುದರಿಂದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇಂತಹ ದುಷ್ಕೃತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಎಂದು ಬಿಜೆಪಿಯು ಮನವಿಯಲ್ಲಿ ಉಲ್ಲೇಖಿಸಿ
ಒತ್ತಾಯಿಸಿದರು.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಸುನೀಲ ನಾಯ್ಕ, ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಂ, ಬಿಜೆಪಿ ಹಿಂದುಳಿದ ಮೊರ್ಚ ಉಪಾಧ್ಯಕ್ಷ ಈಶ್ವರ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಗೋವಿಂದ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.