ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸೂಚನೆ ಮೇರೆಗೆ ದಿನಾಂಕ ಸೆ.13ರಂದು ತಾಲೂಕಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.
ಅವರು ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರಿಗೆ ವಿಷಯ ತಿಳಿಸಿ, ಲೋಕ ಅದಾಲತ್‌ನಲ್ಲಿ ರಾಜೀಯಾಗತಕ್ಕ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದ್ದು ಕಕ್ಷಿದಾರರು, ನ್ಯಾಯವಾದಿಗಳು ಮುಂದೆ ಬಂದು ತಾಲೂಕಾ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ಗೆ ಪ್ರಕರಣವನ್ನು ತರುವಂತೆಯೂ ಕೋರಿದ್ದಾರೆ.
ಸೆ.13ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ವಕೀಲರ ಸಂಘದ ಸಹಯೋಗದೊಂದಿಗೆ 1508 ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಕರಣಗಳು ಬರುವ ಸಾಧ್ಯತೆ ಇದ್ದು ಕಕ್ಷಿದಾರರು ಕೂಡಾ ರಾಜಿಯಾಗತಕ್ಕ ಪ್ರಕರಣಗಳನ್ನು ತಮ್ಮ ವಕೀಲರ ಮೂಲಕ ಇಲ್ಲವೇ ನೇರವಾಗಿ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ನಲ್ಲಿ ತಂದು ರಾಜೀ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಪಕ್ಷಗಾರರಿಗೆ ಹೊರೆಯಾಗದಂತೆ ಎರಡೂ ಪಕ್ಷಗಾರರ ಒಪ್ಪಿಗೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು. ಇಲ್ಲಿ ಪ್ರಕರಣ ಒಮ್ಮೆ ರಾಜೀಯಾಗಿ ಇತ್ಯರ್ಥವಾದರೆ ಅವುಗಳಿಗೆ ಅಪೀಲು ಕೂಡಾ ಇರುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ ಫೀ ಕೂಡಾ ಪರತ್ ದೊರೆಯುವುದರಿಂದ ಕಕ್ಷಿದಾರರಿಗೆ ಹೊರೆಯಾಗುವದಿಲ್ಲ ಎಂದರು. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾಗುವುದರಿಂದ ಪರಸ್ಪರ ಪಕ್ಷಗಾರರಲ್ಲಿನ ಸ್ನೇಹ ಉಳಿಯುವುದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಮೂಡುತ್ತದೆ. ಲೋಕ ಅದಾಲತ್‌ನಲ್ಲಿ ಐ.ಪಿ.ಸಿ., ರಾಜೀಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಪ್ರಕರಣ, ವಾಂಟಣಿ ಪ್ರಕರಣ, ಜಮೀನು ಸ್ವಾಧೀನ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣ, ಮೊಟಾರು ವಾಹನ ಅಪಘಾತ ಪ್ರಕರಣ ಸೇರಿದಂತೆ ಇನ್ನೂ ಅನೇಕ ಪ್ರಕರಣಗಳು ರಾಜೀಯಾಗತಕ್ಕವಾಗಿದ್ದು ಪಕ್ಷಗಾರರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.
ವರದಿ :ಉಲ್ಲಾಸ ಶಾನಭಾಗ ಶಿರಾಲಿ.
ಸೆ.13ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್
