
ಇದೇ ಪ್ರಥಮ ಬಾರಿಗೆ ಕಚೇರಿಯ ಸಭಾಂಗಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಭಟ್ಕಳ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಕಟ್ಟಿರುವ ಸಂದರ್ಭದಲ್ಲಿ ಭಟ್ಕಳ ತಾಲ್ಲೂಕು ಆಡಳಿತ ಸೌಧದಲ್ಲಿಯೂ ಹಬ್ಬದ ಹರುಷ ಆವರಿಸಿತು. ಈ ಬಾರಿ ವಿಶೇಷವೆಂದರೆ, ತಾಲ್ಲೂಕು ತಹಸೀಲ್ದಾರ್ ಕಚೇರಿಯ ಸಭಾಂಗಣವೇ ಗಣೇಶ ಹಬ್ಬದ ಕೇಂದ್ರವಾಗಿತ್ತು.
ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರ ಮುಂದಾಳತ್ವದಲ್ಲಿ ಇದೇ ಮೊದಲ ಬಾರಿಗೆ ಕಚೇರಿಯ ಸಭಾಂಗಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ಅರ್ಚಕರ ಮಂತ್ರೋಚ್ಚಾರಣೆಯೊಂದಿಗೆ ಪೂಜಾ ಕಾರ್ಯಕ್ರಮ ನಡೆದಿದ್ದು, ಅಧಿಕಾರಿಗಳು ಮತ್ತು ನೌಕರರು ಒಟ್ಟಾಗಿ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿ ವ್ಯಕ್ತಪಡಿಸಿದರು.
ಪ್ರಸಾದ ಹಾಗೂ ಸಿಹಿ ವಿತರಣೆ ಮೂಲಕ ಹಬ್ಬದ ಸಂತೋಷ ಹಂಚಿಕೊಳ್ಳಲಾಯಿತು. “ದೇಶದೆಲ್ಲೆಡೆ ವಿಜೃಂಭಣೆಯಿಂದ ಗೌರಿ–ಗಣೇಶ ಹಬ್ಬ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪನೆ ಜರುಗಿದೆ” ಎಂದು ತಹಸೀಲ್ದಾರ್ ಕೊಳಶೆಟ್ಟಿ ತಿಳಿಸಿದರು.
ಸಂಜೆಯ ವೇಳೆಗೆ ಚೌಥನಿ ಹೊಳೆ ತೀರದಲ್ಲಿ ಗಣಪತಿ ವಿಸರ್ಜನಾ ಮಹೋತ್ಸವ ಜರಗಿದ್ದು, ಹಬ್ಬದ ಸಂಭ್ರಮ ಆಡಳಿತ ವಾತಾವರಣಕ್ಕೂ ಹೊಸ ಕಳೆ ತಂದಿತು.
ವರದಿ: ಉಲ್ಲಾಸ್ ಶಾನ ಭಾಗ ಶಿರಾಲಿ.