ಮಾರ್ಚ್ 8ರಂದು ನಡೆಯುವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧ ಮತ್ತು ಭಕ್ತಿ ಭಾವದಿಂದ, ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯ್ ಮಾನಕರ ತಿಳಿಸಿದ್ದಾರೆ.
ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಮುರುಡೇಶ್ವರದ ಕಡಲ ಕಿನಾರೆ ಬಳಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರಿಂದ ಶಿವನಿಗೆ ಸಂಬಂಧಿಸಿದ ವಿವಿಧ ಭಕ್ತಿ ಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಭರತನಾಟ್ಯ ಕಥಕಳಿ ಒಡಿಸ್ಸಿ ನೃತ್ಯಗಾರರು ಆಗಮಿಸಲಿದ್ದು ಶಿವ ತಾಂಡವ, ಶಿವ ಪುರಾಣ, ಶಿವಲೀಲೆ, ನೃತ್ಯ ಕಾರ್ಯಕ್ರಮಗಳು ಹಾಗೂ ಶಿವನಿಗೆ ಸಂಬಂಧಿಸಿದ ಭಕ್ತಿ ಗೀತೆಗಳು ಹಾಗೂ ವಾದ್ಯ ಕಾರ್ಯಕ್ರಮಗಳು ಮಾರ್ಚ್ 8ರಂದು ರಾತ್ರಿ 8:00 ಗಂಟೆ ಯಿಂದ ಮರುದಿನ ಬೆಳಿಗ್ಗೆ 5 ಗಂಟೆ ತನಕ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶಿವರಾತ್ರಿ ಎಂದು ನಡೆಯುವ ಈ ಅಭೂತಪೂರ್ವ ಭಕ್ತಿ ಪೂರಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಮಹಾಶಿವರಾತ್ರಿಯ ಜಾಗರಣ ಅರ್ಥಪೂರ್ಣವಾದ ಭಕ್ತಿ ಭಾವದಿಂದ ಪರಶಿವನ ಧ್ಯಾನದಲ್ಲಿ ತಲ್ಲೀನರಾಗುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.