ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜಿ.ಪಂ ಉತ್ತರ ಕನ್ನಡ, ತಾಲೂಕಾ ಪಂಚಾಯತ ಭಟ್ಕಳ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಟ್ಕಳ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಇವರ ಆಶ್ರಯದಲ್ಲಿ
ಮೂರು ದಿನಗಳ ಕಾಲ ಮುರ್ಡೇಶ್ವರದ ಕೆರೆಕಟ್ಟೆ ಶಾಲೆಯಲ್ಲಿ ನಡೆದ “ಮಕ್ಕಳ ಸಾಹಿತ್ಯ ಸಂಭ್ರಮ”
ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು
ಭಟ್ಕಳ ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿಗಳಾದ ವಿ.ಡಿ ಮೊಗೇರರವರು ವಹಿಸಿ
ಮಕ್ಕಳ ಅನಿಸಿಕೆಯಲ್ಲಿಯೇ ಈ ಕಾರ್ಯಕ್ರಮದ ಯಶಸ್ಸು ಪ್ರತಿಬಿಂಬಿತವಾಗಿದೆ. ಈ ಕಾರ್ಯಕ್ರಮ ನಮ್ಮ
ನಿರೀಕ್ಷೆಗೂ ಮೀರಿ ಫಲಿತಾಂಶವನ್ನು ತಂದುಕೊಟ್ಟಿದೆ. ಮಕ್ಕಳೇ ಸ್ವತಃ ನಾಟಕ ರಚಿಸಿ ಅಭಿನಯಿಸಿರುವುದು, ಕಥೆ
ಕಟ್ಟಿ ಅಭಿನಯಿಸಿರುವುದು, ಕವನ ರಚಿಸಿ ವಾಚಿಸಿರುವುದು, ವಿವಿಧ ವೃತ್ತಿ, ಸಾಧಕರನ್ನು ಸಂದರ್ಶಿಸಿ
ವರದಿಸಿರುವುದನ್ನು ಕಂಡಾಗ ಮಕ್ಕಳ ಕುರಿತು ಹೆಮ್ಮೆ ಎನಿಸಿದೆ. ಇಂಥಹ ಕಾರ್ಯಕ್ರಮಗಳು ಎಲ್ಲಾ ಮಕ್ಕಳಿಗೂ
ಸಿಗುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಜಮೀರುಲ್ಲಾ ಷರೀಪ್‌ರವರು ಮಾತನಾಡಿ, ಮಕ್ಕಳಿಗೆ ಅವಕಾಶ ನೀಡಿದರೆ ಹಿರಿಯರನ್ನೂ ಮೀರಿಸಬಹುದು ಎಂಬುದಕ್ಕೆ ಈ
ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ
ಗಂಗಾಧರ ನಾಯ್ಕರವರು ಈ ಕಾರ್ಯಕ್ರಮವು ನನ್ನ ಮೇಲೆ ತುಂಬಾನೇ ಪರಿಣಾಮ ಬೀರಿದ್ದು ಇಲ್ಲಿನ ಮಕ್ಕಳ
ಜೊತೆಗೆ ಉಳಿದ ಮಕ್ಕಳಿಗೂ ಕೂಡ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನದಲ್ಲಿ ಅವಕಾಶ
ಮಾಡಿಕೊಡಲಾಗುವುದು ಎಂದು ಹೇಳಿದರು. ವೇದಿಕೆಯ ಮೇಲೆ ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ
ಗಜಾನನ ಭಟ್, ಸದಸ್ಯರಾದ ಎಂ.ವಿ ಹೆಗಡೆ, ಲಯನ್ಸ್ ಕ್ಲಬ್ ಕೋಶಾಧ್ಯಕ್ಷರಾದ ಡಾ.ವಾಧಿರಾಜ ಭಟ್, ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಉದಯ ಬೋರ್ಕರ್, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಉಲ್ಲಾಸ ನಾಯ್ಕ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಎಂ.ಡಿ ರಫೀಕ್, ಶಿಕ್ಷಕಿ ಪದ್ಮಾವತಿ ನಾಯಕ, ಕೆರೆಕಟ್ಟೆ ಶಾಲೆಯ ಮುಖ್ಯಾಧ್ಯಾಪಕಿ ಸುರೇಖಾ ಭಂಡಾರಿ ಉಪಸ್ಥಿತರಿದ್ದರು.
ಶಿಕ್ಷಕಿ ಹೇಮಾ ನಾಯ್ಕ ಪ್ರಾರ್ಥಿಸಿದರು, ಭಟ್ಕಳದ ಬಿ.ಆರ್.ಪಿ ನಾಗೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು, ಸಿ.ಆರ್.ಪಿ ಕುಂಟವಾಣಿ ಸುರೇಶ ಮುರ್ಡೇಶ್ವರ ವಂದಿಸಿದರು. ಸAಪನ್ಮೂಲ ವ್ಯಕ್ತಿಗಳಾಗಿ ಬಿ.ಆರ್.ಪಿ ನಾಗೇಶ ಮಡಿವಾಳ, ಸಿ.ಆರ್.ಪಿ ಸುರೇಶ ಮುರ್ಡೇಶ್ವರ, ದಾಸಾ ಶೆಟ್ಟಿ, ದಿನೇಶ ದೇಶಭಂಡಾರಿ, ಚೆನ್ನವೀರ ಹೊಸಮನಿ, ಮಂಜುನಾಥ ದೇವಾಡಿಗ, ಸಂಜಯ ಗುಡಿಗಾರ, ನಾರಾಯಣ ಮೊಗೇರ, ಹೇಮಾ ನಾಯ್ಕ, ಸಿ.ಡಿ ಪಡುವಣಿ, ನಾಗಪ್ಪಯ್ಯ ಆಚಾರಿ, ವಿಜಯ ಗುನಗಾ, ಇಂದುಮತಿ ಬಿ.ಜಿ, ಮೋಹನ ನಾಯ್ಕ, ಸುಜಾತಾ ನಾಯ್ಕ, ಪೂರ್ಣಿಮಾ ನಾಯ್ಕ ಮೂರು ದಿನಗಳ ಕಾಲ ಮಕ್ಕಳನ್ನು ತರಬೇತುಗೊಳಿಸಿದರು. ಮಾವಳ್ಳಿ-೧, ಮಾವಳ್ಳಿ-೨ ಹಾಗೂ ಕಾಯ್ಕಿಣಿ ಗ್ರಾಮ ಪಂಚಾಯತ್‌ಗಳ ೬,೭,೮,ಹಾಗೂ ೯ನೇ ತರಗತಿಗಳ ಆಯ್ದ ೧೦೦ ಮಕ್ಕಳು ಈ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುರ್ಡೇಶ್ವರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ “ಮಕ್ಕಳ ಸಾಹಿತ್ಯಸಂಭ್ರಮ”
