ಭಟ್ಕಳ: ಕನ್ನಡ ಸಾಹಿತ್ಯವು ಮಾನವೀಯ ಮೌಲ್ಯಗಳ ಗಣಿಯಾಗಿದೆ: ಪ್ರೊ. ಲತಾ ನಾಯ್ಕ

Share

ಭಟ್ಕಳ: ಕನ್ನಡ ಸಾಹಿತ್ಯವನ್ನು ಎದೆಗೆ ಹಚ್ಚಿಕೊಂಡು ಅಧ್ಯಯನ ಮಾಡಿದ ಯಾವುದೇ ವ್ಯಕ್ತಿ ತನಗರಿವಿಲ್ಲದೆ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕನ್ನಡ ಸಾಹಿತ್ಯವೇ ಒಂದು ಮಾನವೀಯ ಮೌಲ್ಯಗಳ ಗಣಿಯಾಗಿದೆ ಎಂದು ಮಂಕಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರೊ. ಲತಾ ನಾಯ್ಕ ಹೇಳಿದರು.
ಭಟ್ಕಳ ತಾಲೂಕಿನ ಹಡೀಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಅಂಜುಮನ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ಶಿಬಿರದ ನಾಲ್ಕನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತ ಲತಾ ನಾಯ್ಕ ಈ ಮಾತುಗಳನ್ನು ಹೇಳಿದರು. ಪ್ರಾಚೀನ ಕನ್ನಡ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಮತ್ತು ಜಾನಪದ ಸಾಹಿತ್ಯದಲ್ಲಿ ಎಲ್ಲೆಂದರಲ್ಲಿ ಪ್ರೀತಿ ಪ್ರಾಮಾಣಿಕತೆ, ಮಾನವೀಯ ಅಂತಃಕರಣ, ಸಾಮರಸ್ಯ, ಸಹಕಾರ, ಸಹನೆ, ಹೊಂದಾಣಿಕೆ, ತ್ಯಾಗ ಇತ್ಯಾದಿ ಮೌಲ್ಯಗಳು ಹಾಸುಹೊಕ್ಕಾಗಿವೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

ಅತಿಥಿಯಾಗಿ ಆಗಮಿಸಿದ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಆಶಾ ನಾಯ್ಕ ಅವರು ಎನ್‍ಎಸ್‍ಎಸ್ ಶಿಬಿರ ನಮ್ಮ ಶಾಲಾ ಆವರಣದಲ್ಲಿ ನಡೆಯುತ್ತಿರುವುದರಿಂದ ನಮಗೂ ನಮ್ಮ ಮಕ್ಕಳಿಗೂ ಮತ್ತು ಊರ ನಾಗರಿಕರಿಗೂ ತುಂಬಾ ಉಪಯುಕ್ತವಾಗಿದೆ. ಅದಕ್ಕಾಗಿ ಅಂಜುಮನ್ ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಮಂಜುನಾಥ ಪ್ರಭು, ರಾಷ್ಟ್ರೀಯ ಸೇವಾ ಯೋಜನೆಯ ಭಾಗವಾಗುವುದರಿಂದ ಸ್ವಯಂಸೇವಕರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಬೆಳೆಯುವುದರ ಜೊತೆಗೆ ನಾಯಕತ್ವಗುಣ ವರ್ಧಿಸುತ್ತದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ವಿದ್ಯಾ ಮತ್ತು ತಂಡದವರು ಎನ್ನೆಸ್ಸೆಸ್ ಗೀತೆ ಹಾಡಿದರೆ, ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ. ಆರ್. ಎಸ್. ನಾಯಕ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕುಮಾರಿ ದಿಪಾಲಿ ಮತ್ತು ಕುಮಾರಿ ಅಮೃತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!