ಭಟ್ಕಳ: ಇಲ್ಲಿನ ವೆಂಕಟಾಪುರ ಗ್ರಾಮದ ಸರ್ವೆ ನಂಬರ್ 53 ಕುಮ್ಕಿ ಹಾಡಿಯನ್ನು ಸ್ಲಮ್ ಬೋರ್ಡಿಗೆ ಹಸ್ತಾಂತರಿಸಿ ಸದರಿ ಭೂಮಿಯನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳುವ ಪ್ರಯತ್ನ ನಡೆದಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಅಲ್ಲಿನ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ವೆಂಕಟಾಪುರ ಭಾಗದ ಜನರ ಕೃಷಿ ಭೂಮಿಗೆ ಹಾಗೂ ಜಾನುವಾರುಗಳಿಗಾಗಿ ಇರುವ ಏಕೈಕ ಸೊಪ್ಪಿನ ಬೆಟ್ಟ ಇದಾಗಿದೆ. ಈ ಭಾಗದಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಕೊಟ್ಟಿಗೆಗಳಿದ್ದು, 250ಕ್ಕೂ ಹೆಚ್ಚು ರಾಸುಗಳು ಇವೆ. ಭೂಮಿ ಹಸ್ತಾಂತರದಿಂದ ಜಾನುವಾರುಗಳ ಮೇವಿಗೂ ಬರ ಎದುರಾಗಲಿದೆ. ಈಗಾಗಲೇ ವೆಂಕಟಾಪುರ ಸರ್ವೆ ನಂಬರ್ 53 ಕುಮ್ಕಿ ಹಾಡಿಯಲ್ಲಿರುವ ಅರ್ಧದಷ್ಟು ಕಾಡನ್ನು ಯುಜಿಡಿ ಯೋಜನೆಗಾಗಿ ನಾಶ ಮಾಡಲಾಗಿದೆ. ಈಗ ಉಳಿದಿರುವ ಕಾಡನ್ನೂ ನಾಶ ಮಾಡುವ ಪ್ರಯತ್ನಕ್ಕೆ ನಮ್ಮ ವಿರೋಧ ಇದೆ. ಅಧಿಕಾರಿಗಳು ಈ ಹಾಡಿ ಜಮೀನನ್ನು ಉಳಿಸುವುದರತ್ತ ಗಮನ ಹರಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಹಾಯಕ ಆಯುಕ್ತೆ ಡಾ.ನಯನಾ ಮನವಿ ಪತ್ರವನ್ನು ಸ್ವೀಕರಿಸಿದರು. ಸುಬ್ರಾಯ ನಾಯ್ಕ, ನಾಗರಾಜ ನಾಯ್ಕ, ರಾಮ ನಾಯ್ಕ, ಬಾಬು ನಾಯ್ಕ, ಈಶ್ವರ ನಾಯ್ಕ, ಮಾದೇವ ನಾಯ್ಕ, ಚಂದ್ರು ಗೊಂಡ, ಮಾಸ್ತಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.