ಭಟ್ಕಳ: ಸಚಿವ ರಾಜಣ್ಣ ರಾಮನ ಬಗ್ಗೆ ಮಾತನಾಡಿರುವುದು ಸರಿಯಲ್ಲ, ಅವರ ಮಾನಸಿಕತೆ ಕುರಿತು ನನಗೆ ಅನುಮಾನ ಮೂಡುತ್ತಿದೆ. ರಾಮನ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಮ್ಮದೇ ಸರಕಾರದ ಸಚಿವರ ವಿರುದ್ಧ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಹಾಗೂ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್ ವೈದ್ಯ ಹರಿಹಾಯ್ದರು.
ಅವರು ಮಂಗಳವಾರ ತಾಲೂಕಿನ ಕರಿಕಲ್ ನಲ್ಲಿರುವ ಶ್ರೀರಾಮ ಧ್ಯಾನ ಕುಠಿರದಲ್ಲಿ ರಾಮನ ಪೂಜೆ ನೆರವೇರಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಮನ ವಿಷಯದಲ್ಲಿ ಕಾಂಗ್ರೇಸ್ ಪಕ್ಷ ರಾಜಕೀಯ ಏಕೆ ಮಾಡುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ದೇಶದಲ್ಲಿ ಎಲ್ಲರ ಪರಿಶ್ರಮದಿಂದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಆಗಿದ್ದು ಎಲ್ಲವೂ ಒಳ್ಳೆಯದೇ ಆಗಿದೆ.ರಾಮನ ವಿಷಯವೇ ಬೇರೆ ಪಕ್ಷದ ರಾಜಕಾರಣವೇ ಬೇರೆ. ಕಾಂಗ್ರೇಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷ ಇರಲಿ ರಾಮನ ಹೆಸರಲ್ಲಿ ರಾಜಕೀಯ ಮಾಡಕೂಡದು.ರಾಮನಿಗೆ ಅಪಮಾನ ರೀತಿಯಲ್ಲಿ ಯಾರಾದರೂ ವರ್ತಿಸಿದರೆ ಖಂಡಿತವಾಗಿಯೂ ರಾಮ ಯಾವತ್ತೂ ಕ್ಷಮಿಸಲ್ಲ ಎಂದ ಅವರು, ರಾಮ ನಮ್ಮವ, ನಾವೆಲ್ಲ ರಾಮನ ಭಕ್ತರು. ಎಲ್ಲರೂ ಸಂತಸದಿಂದಲೇ ರಾಮನನ್ನು ನಮಿಸಿ. ರಾಮನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದರೆ ಅವರ ಮನಸ್ಥಿತಿ ಸರಿ ಇಲ್ಲ ಎಂದರ್ಥ. ಎಲ್ಲರೂ ಸಹೋದರ ಭಾವನೆಯಿಂದ ಬಾಳುವುದು ಅಗತ್ಯ. ಸಧ್ಯವೇ ಅಯೋಧ್ಯೆಗೆ ಹೋಗುತ್ತೇನೆ. ರಾಮ ಮಂದಿರ ನಿರ್ಮಾಣಕ್ಕೆ ನಾನೂ ವೈಯಕ್ತಿ ಸಹಾಯ ನೀಡಿದ್ದೇನೆ. ಭವ್ಯ ರಾಮಮಂದಿರ ನಿರ್ಮಾಣ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲೆ ಸದಾ ರಾಮನ ರಕ್ಷಣೆ ಇದೆ. ಭಟ್ಕಳದಲ್ಲಿ ರಾಮನನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಲು, ಹಿಂದೂ ಸಂಪ್ರಾಯದಂತೆ ಸೇವೆ ಮಾಡಲು ಎಲ್ಲ ಅವಕಾಶ ಮಾಡಿಕೊಟ್ಟಿದ್ದೇನೆ. ಪೂಜೆ, ಮೆರವಣೆಗೆ, ಭಜನೆ ರಾತ್ರಿ ಎಷ್ಟು ಸಮಯಕ್ಕೆ ಬೇಕಾದರೂ ಮಾಡಲಿ ಯಾರು ಕೂಡ ಅಡ್ಡಿಮಾಡಲ್ಲ. ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ನಾನು ರಾಮನ ಕಟ್ಟಾ ಭಕ್ತ, ಯಾರಾದರೂ ರಾಮನ ವಿರುದ್ಧ ಮಾತನಾಡಿದರೆ ನಾನು ಅವರ ವಿರುದ್ಧವಾಗಿರುತ್ತೇನೆ. ಒಬ್ಬರು ಇನ್ನೊಬ್ಬರಿಗೆ ತೊಂದರೆ ಆಗದ ರೀತಿಯಲ್ಲಿ ರಾಮನನ್ನು ಭಕ್ತಿ ಭಾವದಿಂದ ಪೂಜಿಸಿ ಎಂದು ರಾಮಭಕ್ತರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸುರೇಶ್ ನಾಯ್ಕ ಸೇರಿದಂತೆ ಸಚಿವರ ಕುಟುಂಬದ ಸದಸ್ಯರು, ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ನಾಮಧಾರಿ ಸಮಾಜದ ಮುಖಂಡರು ಉಪಸ್ಥಿತರಿದ್ದರ.