ಮಂಡ್ಯ: ಶಿಕ್ಷಕಿ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ಆದರೆ ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಪತ್ತೆಯಾಗಿತ್ತು.
ವಿವಾಹಿತ ಯುವತಿಯೊಬ್ಬಳ ಶವ ಮಣ್ಣಿನಲ್ಲಿ ಹೂತಿಟ್ಟ ರೀತಿ (body found) ಪತ್ತೆಯಾಗಿದೆ. ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ದೇವಾಲಯ ಇರುವ ಬೆಟ್ಟದ ತಪ್ಪಲಿನಲ್ಲಿಯೇ ಶಿಕ್ಷಕಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆಯಾದ ರೀತಿ ಹಾಗೂ ಕಾರಣಗಳ ಬಗ್ಗೆ ಕುತೂಹಲ ಕೆರಳಿಸಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಘಟನೆ ನಡೆದಿದೆ. ಮಾಣಿಕ್ಯನಹಳ್ಳಿಯ ದೀಪಿಕಾ (28) ಕೊಲೆಯಾಗಿರುವ ಯುವತಿ. ಈಕೆ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದರು. ಮಾಣಿಕ್ಯನಹಳ್ಳಿಯ ವೆಂಕಟೇಶ್ ಎಂಬವರ ಮಗಳಾಗಿರುವ ದೀಪಿಕಾ ಅವರನ್ನು ಅದೇ ಗ್ರಾಮದ ಲೋಕೇಶ್ ಎಂಬವರ ಜೊತೆ ಮದುವೆ ಮಾಡಿಸಲಾಗಿತ್ತು. ದಂಪತಿಗಳಿಗೆ 8 ವರ್ಷದ ಮಗು ಸಹ ಇದೆ.ಶಿಕ್ಷಕಿ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿ ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ಆದರೆ ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಪತ್ತೆಯಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸ್ಕೂಟರ್ ನಿಂತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಕೂಟರ್ ವಶಕ್ಕೆ ಪಡೆದು ಅದರ ನಂಬರ್ ನೆರವಿನಿಂದ ಶಿಕ್ಷಕಿಯ ಊರು ಪತ್ತೆ ಹಚ್ಚಿ ಮನೆಗೆ ಮಾಹಿತಿ ನೀಡಿದ್ದರು. ಇಂದು ಅದೇ ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯಕ್ತಿಕ ದ್ವೇಷ, ಸುಲಿಗೆ, ಅತ್ಯಾಚಾರ ಮತ್ತಿತರ ಕೋನಗಳಲ್ಲಿ ತನಿಖೆ ನಡೆಯುತ್ತಿದೆ.