“ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆ” ತಕ್ಷಣ ಕ್ರಮಕ್ಕೆ ಆಗ್ರಹ

Share

* ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞರ ಕೊರತೆ *
* ಮೂರು ವೈದ್ಯರ ನೇಮಕ ಮಾಡಲು ಯಾಕೆ ಹಿಂದೇಟು * *ಸಚಿವರ ಜನತಾದರ್ಶನ ಪ್ರಯೋಜನಕ್ಕೆ ಬರುತ್ತಿಲ್ಲ*
* ಮಾಸ್ತಪ್ಪ ನಾಯ್ಕ

  

ಭಟ್ಕಳ:  ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗಿದ್ದು, ಸಾರ್ವಜನಿಕರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಸರಕಾರಿ ಆಸ್ಪತ್ರೆ ಬಳಿಯ ಆಟೋ ಚಾಲಕರು, ಸಾರ್ವಜನಿಕರು ಹಾಗೂ ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯ್ಕ ಅವರಿಂದ ಪ್ರತ್ಯೇಕವಾಗಿ ಶುಕ್ರವಾರದಂದು ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಆಟೋ ಚಾಲಕರುಗಳ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೂಳೆ (ಆರ್ಥೋಪೆಡಿಕ್) ಹಾಗೂ ಹೆರಿಗೆ ಸಂಬಂಧಿತ ತಜ್ಞ ವೈದ್ಯರ ಕೊರತೆ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಹಿಂದೆ ರಾಜ್ಯಕ್ಕೆ ಮಾದರಿಯಾಗಿದ್ದ ಆಸ್ಪತ್ರೆ ಈಗ ತಜ್ಞರ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವೈದ್ಯರ ಕೊರತೆಯಿಂದ ತುರ್ತು ಚಿಕಿತ್ಸೆಗೆ ಭಟ್ಕಳದ ಬಡ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವೆಚ್ಚವನ್ನು ಭರಿಸಲು ಆಗದೇ ಅನೇಕರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ ಎಂದು ಆಟೋ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ದಿನಗೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

‘ಮಾಸ್ತಪ್ಪ ನಾಯ್ಕ ಅವರಿಂದ ಮನವಿ ಸಲ್ಲಿಕೆ’
ಯಂಗ್‌ ಒನ್‌ ಇಂಡಿಯಾ ಸಂಸ್ಥೆಯ ಮಾಲಕ ಹಾಗೂ ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯ್ಕ ಅವರು ತಹಶೀಲ್ದಾರರು ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು, ಕಣ್ಣಿನ ತಜ್ಞರು, ಅಸ್ಥಿ ತಜ್ಞರು, ಫಾರ್ಮಸಿಸ್ಟ್‌ಗಳು, ಗ್ರೂಪ್-ಡಿ ನೌಕರರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಗುಣಮಟ್ಟದ ಔಷಧಿಗಳ ಅಭಾವವೂ ಇರುವುದಾಗಿ ತಿಳಿಸಿದ್ದಾರೆ.
ತಾಲೂಕಿನ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದೆ ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಚಿಕಿತ್ಸೆಗೆ ಒಳಪಡುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಸಿಗದ ಕಾರಣ ಸಾವು-ನೋವುಗಳಂತಹ ದುರ್ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಆದ್ದರಿಂದ ತಕ್ಷಣವೇ ಅಗತ್ಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡುವುದು, ಆಸ್ಪತ್ರೆಯಲ್ಲಿ ಗುಣಮಟ್ಟದ ಔಷಧಿಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಶೀಘ್ರ ಕ್ರಮ ವಹಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಶಿರಸ್ತೇದಾರರಾದ ಪ್ರವೀಣ ಕುಮಾರ ಹಾಗೂ ರಾಧಿಕಾ ಶಾಸ್ತ್ರೀ ಮತ್ತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ ಕುಮಾರ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಣೇಶ್ ಹಳ್ಳೇರ:-
“ಕುದ್ದು ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಪರಿಹರಿಸದಿರುವುದು ಬೇಸರದ ವಿಷಯ. ಎರಡು ವರ್ಷದಿಂದ ಹೆರಿಗೆ ಹಾಗೂ ಮೂಳೆ ತಜ್ಞರ ಕೊರತೆಯ ಬಗ್ಗೆ ಸಚಿವರಲ್ಲಿ ಮನವಿ ಸಲ್ಲಿಸಿದ್ದು ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆಯಾಗಿದೆ. ತಾಲೂಕಾಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ ಬಡವರಿಗೆ ಸೌಕರ್ಯ ಸಿಗುವಂತೆ ಮಾಡಬೇಕು ಎಂದರು.

ಸಾಮಾಜಿಕ ಹೋರಾಟಗಾರ ಮಾಸ್ತಪ್ಪ ನಾಯಕ್ ಅವರು ಮಾತನಾಡಿ:-
‘ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಉಳಿದ ತಪಾಸಣೆ ಮಾಡಿಸುವಷ್ಟು ಹಣ ಈ ಭಾಗದ ಬಡ ಜನರಿಗೆ ಸಾಧ್ಯವಿಲ್ಲ. ಸರಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ವೈದ್ಯರನ್ನು ನೇಮಿಸಿದಲ್ಲಿ ಅನೂಕೂಲ ಆಗಲಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಯ ಮಧ್ಯೆ ಏನಾದರು ಒಪ್ಪಂದ ಆಗಿದೆಯಾ ಎಂದು ಎಂಬ ಅನುಮಾನ ಜನರಲ ಕಾಣುತ್ತಿದೆ. ಈ ಹಿಂದೆ ಸಚಿವರು ಶಾಸಕರಾಗಿದ್ದ ಅವಧಿಯಲ್ಲಿ ನಮ್ಮಿಂದ ಯಾವ ಜನ ಪರ ಕೆಲಸವು ಆಗುವುದಿಲ್ಲ ಎಂಬುದಿಲ್ಲ ಆದರೆ ಮೂರು ವೈದ್ಯರ ನೇಮಕ ಯಾಕೆ ಆಗುತ್ತಿಲ್ಲ..? ನಿಮ್ಮ ಜನತಾ ದರ್ಶನ ಕಾರ್ಯಕ್ರಮ ಪ್ರಯೋಜನಕ್ಕೆ ಬರುತ್ತಿಲ್ಲ ಮುಂದಿನ ಕೆಲ‌ದಿನದಲ್ಲಿ ವೈದ್ಯರ ನೇಮಕವಾಗದಿದ್ದಲ್ಲಿ  ಆಸ್ಪತ್ರೆ ಎದುರು ಧರಣಿ ನಡೆಸಲಿದ್ದೇವೆ.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ, ಶಂಕರ ನಾಯ್ಕ, ಸುರೇಶ ನಾಯ್ಕ, ಶ್ರೀಧರ ನಾಯ್ಕ, ಸೋಮಯ್ಯ ನಾಯ್ಕ ಹಾಗೂ ಸಾರ್ವಜನಿಕರಾದ ವಿನಾಯಕ ನಾಯ್ಕ, ಬಾಬು, ಕೃಷ್ಣ ನಾಯ್ಕ, ಅಶೋಕ ನಾಯ್ಕ, ವಿಶ್ವ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.

ವರದಿ: ಉಲ್ಲಾಸ ಶಾನಭಾಗ್ ಶಿರಾಲಿ.

Leave a Reply

Your email address will not be published. Required fields are marked *

error: Content is protected !!