ಭಟ್ಕಳ: ಭಟ್ಕಳದ ಸಂಸುದ್ದೀನ್ ವೃತ್ತದ ಬಳಿ ನಿರ್ಮಿಸಿದ ಗೋಲ್ಡನ್ ಗಡಿಯಾರದ ಗೋಪುರವು ಇನ್ನು ಮುಂದೆ ನೆನಪು ಮಾತ್ರ. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಎನ್ನುವ ನಾಲ್ಕು ಪಿಲ್ಲರ್ ಗಳ ಮೇಲೆ ಭೂಮಿ ನಿಂತಿದೆ ಎನ್ನುವ ಪರಿಕಲ್ಪನೆ ಯೊಂದಿಗೆ ಗೋಲಾಕಾರದ ಕಲ್ಲನ್ನು ಇರಿಸಿ 2002ರಲ್ಲಿ ಪ್ಯೂರ್ ಗೋಲ್ಡ್ ಮಾಲೀಕರಾದ ಶಬೀಬ್ ಕೋಲಾ ಅವರು ಇದನ್ನು ನಿರ್ಮಿಸಿಕೊಟ್ಟಿದ್ದರು. ಶಬೀಬ್ ಕೋಲಾ ಅವರು ದುಬೈಗೆ ಹೋದಾಗ ಅಲ್ಲಿನ ಗಡಿಯಾರದ ಗೋಪುರದ ವಿನ್ಯಾಸ ನೋಡಿ ಅದೇ ಮಾದರಿ ಹೋಲುವ ಗಡಿಯಾರದ ಗೋಪುರವನ್ನು ವೃತ್ತದಲ್ಲಿ ನಿರ್ಮಿಸಿದ್ದರಿಂದ ಇದು ಬಹಳ ಪ್ರಸಿದ್ಧಿ ಪಡೆದಿತ್ತು .ಈ ಪರಿಕಲ್ಪನೆಯಲ್ಲಿ ಗೋಪುರ ನಿರ್ಮಾಣ ಮಾಡಿದ್ದಕ್ಕೆ ಶಬೀಬ್ ಕೋಲಾ ಇವರಿಗೆ ಹಲವು ಪ್ರಶಸ್ತಿಗಳು ಬಂದಿದ್ದವು.

ಅಂದು ಭಟ್ಕಳವೆಂದರೆ ಈ ಗಡಿಯಾರವನ್ನೇ ತೋರಿಸುವಷ್ಟು ಇದು ಖ್ಯಾತಿ ಪಡೆದಿತ್ತು. ಗೋಪುರದ ನಾಲ್ಕೂ ಕಡೆ ಗಡಿಯಾರ ಹಾಗೂ ಮಧ್ಯದಲ್ಲಿ ಚಿನ್ನದ ಬಳೆ ಮಾದರಿ ಹೊಂದಿ ಗೋಪುರದ ತುದಿಯಲ್ಲಿ ಬೃಹತ್ ಚೆಂಡು ನಿರ್ಮಿಸಿದ್ದರಿಂದ ಬಹಳ ಆಕರ್ಷಣೀಯವಾಗಿತ್ತು.

2002ರಲ್ಲಿ 7-8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಗಡಿಯಾರದ ಗೋಪುರ ವಿವಿಧ ಪಕ್ಷದ ಎಷ್ಟೋ ಪ್ರತಿಭಟನೆ, ಮುಖಂಡರ ಭಾಷಣ, ಜಾಗೃತಿ ಜಾಥಾ, ಕ್ರೀಡಾ ವಿಜಯೋತ್ಸವ ಸೇರಿದಂತೆ ಸಾವಿರಾರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.

ಭಟ್ಕಳ ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಶನಿವಾರ ಗಡಿಯಾರದ ಗೋಪುರವನ್ನು ಜೆಸಿಬಿ ಯಂತ್ರದ ಸಹಾಯದಿಂದ ನೆಲಸಮ ಮಾಡಲಾಗಿದೆ. ಇದೀಗ ಭಟ್ಕಳ ವೃತ್ತದಲ್ಲಿ ಗಡಿಯಾರದ ಗೋಪುರ ಇಲ್ಲವಾಗಿದ್ದು, 24 ವರ್ಷದ ಹಿಂದೆ ನಿರ್ಮಿಸಲಾದ ಗೋಪುರ ಇನ್ನು ಮುಂದೆ ಕೇವಲ ನೆನಪು ಮಾತ್ರ ಎನ್ನುವಂತಾಗಿದೆ.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.
