ಜನಮೆಚ್ಚಿದ ಶಿಕ್ಷಕ ಮಾರುತಿ ನಾಯ್ಕ ಅವರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

Share


ಹೊನ್ನಾವರ : ಇಲ್ಲಿನ ಅರೆಅಂಗಡಿಯಲ್ಲಿ ನಡೆದ 12ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ನಿವೃತ್ತ ಶಿಕ್ಷಕ ಮಾರುತಿ ಗಣಪಯ್ಯ ನಾಯ್ಕ ಅವರಿಗೆ ಸನ್ಮಾನ ನೀಡಿ ಗೌರವಿಸಲಾಗಿದೆ.
ಮಾರುತಿ ಜಿ. ನಾಯ್ಕ ಅವರು ಹೊನ್ನಾವರ ತಾಲೂಕಿನ ಹೆಗ್ಗಾರ್‌ನ ದಿ. ಗಣಪಯ್ಯ ನಾಯ್ಕ ಹಾಗೂ ದಿ. ಈರಮ್ಮ ಅವರ ಕಿರಿಯ ಪುತ್ರರಾಗಿ, ಸರಳತೆ–ಸಂಸ್ಕಾರಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹನೀಯರು. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಶಿರಸಿ ತಾಲೂಕಿನ ಬನವಾಸಿಯ ಹೆಬ್ಬತ್ತಿಯಲ್ಲಿ
ಸತತ 28 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ಅಪರೂಪದ ನಿಷ್ಠೆ ಹಾಗೂ ಸೇವಾಭಾವದ ಪ್ರತೀಕವಾಗಿದೆ. ಶಿಕ್ಷಣವೆಂಬ ದೀಪವನ್ನು ಮಕ್ಕಳ ಮನಸ್ಸಿನಲ್ಲಿ ಬೆಳಗಿಸಿದ ಅವರು, ವೃತ್ತಿಯೆಡೆಗೆ ಶ್ರದ್ಧೆ, ಮಕ್ಕಳ ಮೇಲಿನ ಮಮತೆ, ಜನರೊಂದಿಗೆ ಪ್ರೀತಿ–ವಿಶ್ವಾಸದ ನಡವಳಿಕೆಯಿಂದಲೇ
“ಜನ ಮೆಚ್ಚಿದ ಶಿಕ್ಷಕ” ಪ್ರಶಸ್ತಿಗೆ ಭಾಜನರಾದರು.


ಶಿಕ್ಷಕರ ಸಂಘದಲ್ಲಿ ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿ,ಸಂಘಟನಾ ಶಕ್ತಿಯನ್ನೂ, ಹೊಣೆಗಾರಿಕೆಯನ್ನು ತೋರಿದವರು. ಬನವಾಸಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ನಂತರ ಹೊನ್ನಾವರ ತಾಲೂಕಿನ ಹೆಗ್ಗಾರನಲ್ಲಿ ನೆಲೆಸಿರುವ ಮಾರುತಿ ನಾಯ್ಕ ಅವರ ಜೀವನಯಾನ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕನ್ನಡದ ನೆಲದ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ನೀಡಿರುವ ಗೌರವ ಸನ್ಮಾನವು ಮಾರುತಿ ನಾಯ್ಕ ಅವರ ಬದ್ಧತೆಯ ಸೇವೆಗೆ, ಅರ್ಹತೆಗೆ ಸಂದ ಗೌರವವಾಗಿದೆ. ಇವರ ಕುಟುಂಬದಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡವರೇ ಹೆಚ್ಚು ಎಂಬುದು ವಿಶೇಷ. ಈ ಸಂದರ್ಭದಲ್ಲಿ ಹಿರಿಯ ಸಹೋದರ ನಿವೃತ್ತ ಶಿಕ್ಷಕ ಕೆ. ಎಸ್. ನಾಯ್ಕ, ಹೆಗ್ಗಾರ್, ಪಾಂಡುರಂಗ ನಾಯ್ಕ ಹೆಗ್ಗಾರ್, ದೇವರಾಜ್ ಅರಸು ವಿಚಾರ ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ್, ನಿವೃತ್ತ ಉಪನ್ಯಾಸಕ ಶ್ರೀಧರ್ ನಾಯ್ಕ ಹೆಗಡೆ, ಡಯಟ್ ನ ಉಪನ್ಯಾಸಕಿ ವೀಣಾ ನಾಯ್ಕ, ಡಾ. ಲಕ್ಷ್ಮೀಶ್ ನಾಯ್ಕ, ರಾಜೇಶ್ ಕೆ..ನಾಯ್ಕ, ದಯಾನಂದ್ ಕೆ.ನಾಯ್ಕ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್, ಪ್ರಾಥಮಿಕ್ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಬಾಲಚಂದ್ರ ಪಟಗಾರ್, ಕಸಾಪ ಭಟ್ಕಳ ತಾಲೂಕಾಧ್ಯಕ್ಷ ಗಂಗಾಧರ್ ನಾಯ್ಕ, ಭಾವನಾ ವಾಹಿನಿ ಮುಖ್ಯಸ್ಥ ಭವಾನಿಶಂಕರ್ ನಾಯ್ಕ, ಶಿರಸಿ ಪ್ರಾ. ಶಾ. ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರುಗಳಾದ ಕುಮಾರ್ ನಾಯ್ಕ, ಪ್ರಶಾಂತ ಹೆಗಡೆ, ಬನವಾಸಿಯ ಕಾಂಗ್ರೆಸ್ ಮುಖಂಡ ಶಿವಾನಂದ್ ಪುಟ್ಟಪ್ಪ ನಾಯ್ಕ, ಹೆಬ್ಬತ್ತಿಯ ಶಾಲಾ ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಸದಸ್ಯರು, ಹೆಬ್ಬತ್ತಿಯ ಗ್ರಾಮಸ್ಥರು, ಶಿಕ್ಷಕ ವೃತ್ತಿಯ ಒಡನಾದಿಗಳು ಹಾಗೂ ಕುಟುಂಬವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!