ಹೊನ್ನಾವರ ತಾಲೂಕಿನ ಅನಿಲಗೋಡ್ ಕಾಲುಸೇತುವೆ ಕುಸಿದು ಎರಡು ವರ್ಷ ಕಳೆದರೂ ಮರುನಿರ್ಮಾಣವಾಗಿಲ್ಲ :ಮಾಸ್ತಪ್ಪ ನಾಯ್ಕ್

Share

ನೂರಾರು ಗ್ರಾಮಸ್ಥರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕಿದೆ

ಹೊನ್ನಾವರ :ತಾಲೂಕಿನ ಅನಿಲಗೋಡ್ ಭಾಗದ ಸುಮಾರು 150ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಪ್ರತಿನಿತ್ಯ ಅವಲಂಬಿಸಿಕೊಂಡಿದ್ದ ಕಾಲುಸೇತುವೆ ಮಳೆಗಾಲದಲ್ಲಿ ಕುಸಿದು ಬಿದ್ದು ಸುಮಾರು ಎರಡು ವರ್ಷಗಳು ಕಳೆದರೂ ಅದರ ಮರುನಿರ್ಮಾಣವಾಗದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಬೇಸರಕ್ಕೆ ಕಾರಣವಾಗಿದೆ.

ಈ ಸೇತುವೆ ಅನಿಲಗೋಡ್ ಗ್ರಾಮಸ್ಥರಿಗೆ ಮಾತ್ರವಲ್ಲದೆ ಹೆಗ್ಗಾರ, ಹೊನ್ನಾವರ ಹಾಗೂ ಬಳಕೂರ ಕಡೆಗೆ ಸಂಚರಿಸುವ ಸುಮಾರು 200ಕ್ಕೂ ಹೆಚ್ಚು ಜನರಿಗೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು. ಸೇತುವೆ ಕುಸಿದ ನಂತರ ಗ್ರಾಮಸ್ಥರು ಕನಿಷ್ಠ 5 ಕಿಲೋಮೀಟರ್ ಸುತ್ತುವರಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮಸ್ಥರು ಈ ಸಮಸ್ಯೆ ಕುರಿತು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮಾಜಿ ಸಚಿವರಾಗಿದ್ದ ಹಾಗೂ ಹಾಲಿ ಶಾಸಕರಾಗಿರುವ ಶ್ರೀ ಮಂಕಾಳ ವೈದ್ಯ ಅವರ ಸಚಿವ ಅವಧಿಯಲ್ಲಿಯೂ ಈ ಕುರಿತು ಅನೇಕ ಮನವಿಗಳನ್ನು ಸಲ್ಲಿಸಲಾಗಿತ್ತು. ಅಲ್ಲದೆ ಹೊನ್ನಾವರದಲ್ಲಿ ನಡೆದ ಜನಸಂದರ್ಶನ ಕಾರ್ಯಕ್ರಮಗಳಲ್ಲಿಯೂ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಮನವಿಗಳ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು. ಆದಾಗ್ಯೂ, ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜನಸಂದರ್ಶನ ಕಾರ್ಯಕ್ರಮಗಳಲ್ಲಿ ಸ್ವೀಕರಿಸಲಾಗುವ ಮನವಿಗಳು ಕೇವಲ ರಾಜಕೀಯ ಪ್ರಚಾರಕ್ಕಾಗಿ ಮಾತ್ರವೇ? ಅಥವಾ ಜನರ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶವೂ ಇದೆಯೇ? ಎಂಬ ಪ್ರಶ್ನೆ ಇಂದು ಗ್ರಾಮಸ್ಥರ ನಡುವೆ ಕೇಳಿಬರುತ್ತಿದೆ. ಜನರ ಸಂಕಷ್ಟಗಳನ್ನು ಅರಿತು ಪರಿಹಾರ ನೀಡಬೇಕಾದ ವ್ಯವಸ್ಥೆ ಕೇವಲ ಭರವಸೆಗಳ ಮಟ್ಟದಲ್ಲೇ ಉಳಿದರೆ, ಜನಸಂದರ್ಶನಗಳ ಉದ್ದೇಶವೇ ಪ್ರಶ್ನಾರ್ಥಕವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸೇತುವೆ ಕುಸಿದ ಪರಿಣಾಮ ಅನಿಲಗೋಡ್‌ನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಈ ಭಾಗದಿಂದ ಬೆಳಿಗ್ಗೆ 6 ಗಂಟೆಗೆ ಒಂದೇ ಒಂದು ಬಸ್ ಸಂಚರಿಸುವ ಕಾರಣ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜು ಆರಂಭವಾಗುವುದಕ್ಕಿಂತ ಸುಮಾರು ಎರಡು ಗಂಟೆಗಳ ಮುಂಚಿತವಾಗಿಯೇ ತೆರಳಿ ಕಾಯುವ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಆ ಬಸ್ ತಪ್ಪಿದರೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ₹80 ರಿಂದ ₹100 ವೆಚ್ಚ ಮಾಡಿ ಆಟೋ ಮೂಲಕ ಪ್ರಯಾಣಿಸಬೇಕಾಗುತ್ತದೆ.

ಈ ಭಾಗದ ಬಹುತೇಕ ಕುಟುಂಬಗಳು ಕೃಷಿ ಹಾಗೂ ಕೂಲಿ ಕೆಲಸವನ್ನೇ ಅವಲಂಬಿಸಿಕೊಂಡಿರುವುದರಿಂದ ಪ್ರತಿದಿನ ಹೆಚ್ಚುವರಿ ಪ್ರಯಾಣ ವೆಚ್ಚ ಭರಿಸುವುದು ಅವರಿಗೆ ಅತ್ಯಂತ ಕಷ್ಟಕರವಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಕ್ಕಳ ಶಿಕ್ಷಣದ ಮೇಲೂ ಈ ಸಮಸ್ಯೆ ಗಂಭೀರ ಪರಿಣಾಮ ಬೀರುತ್ತಿದೆ.

ಹಾಲಿ ಶಾಸಕರು ಈ ಹಿಂದೆ ಹಲವು ವೇದಿಕೆಗಳಲ್ಲಿ, “ಒಬ್ಬ ಶಾಸಕರಿಂದ ಆಗದ ಕೆಲಸವೇ ಇಲ್ಲ” ಎಂದು ಹೇಳಿರುವುದನ್ನು ಸಾರ್ವಜನಿಕರು ನೆನಪಿಸುತ್ತಿದ್ದಾರೆ. ಸಚಿವರಾಗಿದ್ದ ಅವಧಿಯಲ್ಲೇ ಈ ಸೇತುವೆಯನ್ನು ನಿರ್ಮಿಸಿದ್ದರೆ ಇಂದು ನೂರಾರು ಕುಟುಂಬಗಳು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಅನಾರೋಗ್ಯ ಪೀಡಿತರು ಈ ಸಂಕಷ್ಟ ಅನುಭವಿಸಬೇಕಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಸಾರ್ವಜನಿಕರ ಅಗತ್ಯಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ, ಜನಹಿತದ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ. ಅನಿಲಗೋಡ್ ಭಾಗದ ಜನರು ಅಭಿವೃದ್ಧಿಯ ಹಕ್ಕಿನಿಂದ ವಂಚಿತರಾಗಬಾರದು. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಹಾಗೂ ಆಡಳಿತದ ಜವಾಬ್ದಾರಿಯಾಗಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಲ್ಲಿ ಸ್ಥಳೀಯ ನಾಗರಿಕರ ಪರವಾಗಿ ವಿನಮ್ರ ಮನವಿ ಮಾಡಿಕೊಳ್ಳುವುದೇನೆಂದರೆ, ಆದಷ್ಟು ಶೀಘ್ರ ಅನಿಲಗೋಡ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಬಹುದಿನಗಳ ಬೇಡಿಕೆಯಾದ ಈ ಕಾಲುಸೇತುವೆಯ ಮರುನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡು ಗ್ರಾಮಸ್ಥರ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳ ಶಿಕ್ಷಣ, ಕೂಲಿ ಕಾರ್ಮಿಕರ ಜೀವನೋಪಾಯ ಹಾಗೂ ಸಾರ್ವಜನಿಕರ ಸುರಕ್ಷಿತ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ವಿನಂತಿಸಿಕೊಳ್ಳಲಾಗಿದೆ.

  • ಗ್ರಾಮಸ್ಥರಾದ ಮಾದೇವಿ ಡಿ. ಅಂಬಿಗ ,ದಾಮೋದರ ಡಿ. ಅಂಬಿಗ,ಗಜಾನನ ಎನ್. ನಾಯ್ಕ,ನರಸಿಂಹ ನಾಯ್ಕ,ಜನಾರ್ಧನ ನಾಯ್ಕ,ಸುರೇಶ್ ನಾಯ್ಕ,ಮಾದೇವ ನಾಯ್ಕ,ಮಂಜು ನಾಯ್ಕ,ಗಜಾನನ ನಾಯ್ಕ,ನಾರಾಯಣ ನಾಯ್ಕ,ವಿಷ್ಣು ನಾಯ್ಕ,ಕುಸುಮಾ ಅಂಬಿಗ,ಮುಕ್ತಾ ನಾಯ್ಕ,ಸುಶೀಲಾ ನಾಯ್ಕ,ಭಾಗೀರಥಿ ನಾಯ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!