ಭಟ್ಕಳದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

Share

ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರಕಾರಿ ನೌಕರರ ಸಂಘ ಮತ್ತು ಜನತಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉಡುಪಿ ಡಯಟ್ ನ ಪ್ರಾಚಾರ್ಯರೂ ಮತ್ತು ಸಂಪನ್ಮೂಲ ವ್ಯಕ್ತಿಗಳು ಆದ ಡಾ. ಅಶೋಕ್ ಕಾಮತ್ ಉದ್ಘಾಟಿಸಿದರು.

ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ದಿಂದ ಇಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ್ದಲ್ಲಿ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದರು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮಾಡಿಕೊಂಡು ಮೊಬೈಲ್ ನಿಂದ ದೂರವಿದ್ದು ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಆಲಸ್ಯ, ನಿರಾಸಕ್ತಿ, ಮತ್ತು ಋಣಾತ್ಮಕ ದೃಷ್ಟಿಕೋನವನ್ನು ಬಿಟ್ಟು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಮಾತನಾಡುತ್ತಾ ಭಟ್ಕಳ ತಾಲೂಕಿನಲ್ಲಿ 2053 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಈಗಾಗಲೇ 3 ಪ್ರೇರಣಾ ಶಿಬಿರಗಳನ್ನು ಸಂಘಟಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲು ಪ್ರೇರಣೆ ನೀಡುವ ಸಲುವಾಗಿ ಈ ಶಿಬಿರವನ್ನು ಏರ್ಪಡಿಸಲಾಗಿದೆ. ಅನುಭವಿಕ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನೀಡಲಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

625 ಅಂಕಗಳಿಗೆ 625 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 10000 ರೂಪಾಯಿ ನೀಡುವುದಾಗಿ ಘೋಷಿಸಿದರು. ಕುಮಟಾ ಡಯಟ್ ನ ಹಿರಿಯ ಉಪನ್ಯಾಸಕ ನಾಗರಾಜ ಗೌಡ ಮಾತನಾಡುತ್ತಾ ಡಾ. ಅಶೋಕ್ ಕಾಮತ್ ರವರು ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಾಧನೆಗಳನ್ನು ಮಾಡಿ ಪ್ರಶಸ್ತಿ ಗಳಿಸಿದವರು. ಅವರಿಂದ ಪ್ರೇರಣೆ ನೀಡುತ್ತಿರುವುದರಿಂದ ಅದು ವಿದ್ಯಾರ್ಥಿಗಳ ಮೇಲೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪ್ರೇರಣಾ ಶಿಬಿರದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಎನ್. ನಾಯ್ಕ ಮಾತನಾಡುತ್ತಾ ತಮ್ಮ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ತರಬೇತಿಗಳು ಲಭ್ಯವಿರಲಿಲ್ಲ . ಈಗ ಇಲಾಖೆಯವರೇ ಇಂತಹ ತರಬೇತಿಗಳನ್ನು ಸಂಘಟಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿ, 625 ಅಂಕಗಳಿಗೆ 625 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ತಲಾ 10000 ರೂಪಾಯಿ ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಅಶೋಕ್ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಘವೇಂದ್ರ ನಾಯ್ಕ ರವರು ಸ್ವಾಗತಿಸಿದರೆ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಶ್ರೀಮತಿ ಪೂರ್ಣಿಮಾ ಮೊಗೇರ ವಂದಿಸಿದರು. ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೇದಿಕೆಯ ಮೇಲೆ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ ಎಸ್ ಹೆಗಡೆ, ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಗಣಪತಿ ಶಿರೂರ, ತೆಂಗಿನಗುಂಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂತೋಷ ಶ್ರೇಷ್ಠಿ, ಸರಕಾರಿ ನೌಕರರ ಸಂಘದ ಲೆಕ್ಕಪತ್ರ ಪರಿಶೋಧಕ ಯು ಏ ಲೋಹಾನಿ, ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಲೀಲಾವತಿ ಮೊಗೇರ, ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಹಾಗೂ ಶಿಕ್ಷಣ ಸಂಯೋಜಕ ಅಶೋಕ್ ಆಚಾರಿ ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಶ್ರೇಷ್ಠಿ, ಶಿವಕುಮಾರ್ ಹಿಚ್ಕಡ, ಡಾ. ಶ್ರೀನಿವಾಸ ನಾಯ್ಕ, ಕಾಲಿಸ್ತಾ ಫರ್ನಾಂಡೀಸ್ , ಸಂತೋಷ ಶೆಟ್ಟಿ, ಗುಡ್ಡಪ್ಪ ಹರಿಜನ, ಶ್ರೀಧರ ಶೇಟ್ ಶಿರಾಲಿ, ಸೀಮಾ ನಾಯಕ, ಮೋಹನ ನಾಯ್ಕ, ಪೂರ್ಣಿಮಾ ಶೆಟ್ಟಿ, ಪದ್ಮಾವತಿ ಪೂಜಾರಿ, ರವಿರಾಜ ಹೊಸಕಟ್ಟಾ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಭಟ್ಕಳ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!