ಭಟ್ಕಳ: ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನ ಹಾಗೂ ಅನಗತ್ಯ ವಿಷಯಗಳ
ಪ್ರಭಾವವನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ‘ಇದಾರ ಅದಾಬ್-ಎ-ಅತ್ಫಾಲ್’ ಸಂಸ್ಥೆಯು ‘ಯಮಾನಿ
ಲ್ಯಾಪ್‌ಟಾಪ್’ ಎಂಬ ವಿಶೇಷ ಶೈಕ್ಷಣಿಕ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಗರದ ರಬಿತಾ ಹಾಲ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಲ್ಯಾಪ್‌ಟಾಪ್ ಅನ್ನು ಲೋಕಾರ್ಪಣೆ ಮಾಡಿದರು. ಇಲ್ಮಿ ಬಾಕ್ಸ್ ಕಂಪನಿಯ ಸಹಯೋಗದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಅಧ್ಯಕ್ಷ ಮೌಲಾನಾ ಡಾ. ಅಬ್ದುಲ್ ಹಮೀದ್ ಅಥರ್ ನದ್ವಿ ಮಾತನಾಡಿ, “ಇಂದಿನ ಪೀಳಿಗೆ ಡಿಜಿಟಲ್ ಲೋಕದ ಫಿತೂರಿಗಳಲ್ಲಿ ಸಿಲುಕುತ್ತಿರುವುದು ಕಳವಳಕಾರಿ ಸಂಗತಿ. ತಂತ್ರಜ್ಞಾನವನ್ನು ದೂರವಿಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಒಳಗೊಂಡ ಧನಾತ್ಮಕ ಪರ್ಯಾಯ ವೇದಿಕೆ ಒದಗಿಸುವುದು ಕಾಲದ ಅಗತ್ಯ” ಎಂದು ಹೇಳಿದರು. ಉರ್ದು ಭಾಷೆಯಲ್ಲಿ ಗುಣಮಟ್ಟದ ಶೈಕ್ಷಣಿಕ ವಿಷಯಗಳ ಕೊರತೆಯನ್ನು ಈ ಲ್ಯಾಪ್‌ಟಾಪ್ ನೀಗಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಖಲೀಫಾ ಜಮಾಅತ್-ಉಲ್-ಮುಸ್ಲಿಮೀನ್‌ನ ಖಾಜಿ ಮೌಲಾನಾ ಖ್ವಾಜಾ ಮುಇನುದ್ದೀನ್ ನದ್ವಿ ಮದನಿ ಮಾತನಾಡಿ, “ಬಾಲ್ಯವು ಕಲಿಕೆಯ ಸೂಕ್ಷ್ಮ ಹಂತ. ಈ ಅವಧಿಯಲ್ಲಿ ರೂಪುಗೊಳ್ಳುವ ಚಿಂತನೆಗಳು ಜೀವನಪೂರ್ತಿ ಪ್ರಭಾವ ಬೀರುತ್ತವೆ. ಪಾಶ್ಚಾತ್ಯ ಜಗತ್ತು ತನ್ನ ಮೌಲ್ಯಗಳಿಗೆ ಅನುಗುಣವಾಗಿ ಮಕ್ಕಳಿಗಾಗಿ ಅಪಾರ ಡಿಜಿಟಲ್ ವಿಷಯಗಳನ್ನು ಸಿದ್ಧಪಡಿಸಿದೆ.

ಇಸ್ಲಾಮಿಕ್ ದೃಷ್ಟಿಕೋನದಿಂದ ಮೌಲ್ಯಯುತ ವಿಷಯಗಳನ್ನು ನೀಡುವುದು ನಮ್ಮ ಜವಾಬ್ದಾರಿ” ಎಂದು ಹೇಳಿದರು. ಈ ಯೋಜನೆ ವಿಶ್ವದಾದ್ಯಂತ ಇರುವ ಉರ್ದು ಭಾಷಿಕರಿಗೆ ಸಹ ಉಪಯುಕ್ತವಾಗಲಿದೆ ಎಂದರು.
ಲ್ಯಾಪ್‌ಟಾಪ್‌ನ ವಿಶೇಷತೆಗಳು: ‘ಯಮಾನಿ ಲ್ಯಾಪ್‌ಟಾಪ್’ನಲ್ಲಿ ಆಯ್ದ ಕುರಾನ್ ಪಠಣಗಳು, ಹದೀಸ್‌ಗಳು,
ದಿನನಿತ್ಯದ ಪ್ರಾರ್ಥನೆಗಳು (ದುವಾ), ಇಸ್ಲಾಮಿಕ್ ಕವಿತೆಗಳು ಹಾಗೂ ಜ್ಞಾನವರ್ಧಕ ವಿಷಯಗಳನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಆಟವಾಡುತ್ತಲೇ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ನೀಡುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸಮಾರಂಭದಲ್ಲಿ ರಾಬಿತಾ ಸೊಸೈಟಿ ಅಧ್ಯಕ್ಷ ಉಮರ್ ಫಾರೂಕ್ ಮುಸ್ಬಾ, ಮಜ್ಲಿಸ್-ಎ-ಇಸ್ಲಾಹ್ ವ- ತಂಝೀಮ್
ಅಧ್ಯಕ್ಷ ಇನಾಯತುಲ್ಲಾ ಶಾಬಂದರಿ, ಮೌಲಾನಾ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಅಲ್ತಾಫ್ ಖರೂರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮೌಲಾನಾ ಅಬ್ದುಲ್ಲಾ ಗಾಝಿ ನದ್ವಿ ಕಾರ್ಯಕ್ರಮ ನಿರೂಪಿಸಿದರು.
