ಭಟ್ಕಳ: ಭಟ್ಕಳದ ನವಾಯತ್ ಕಾಲೋನಿಯ ಸಿಟಿ ಲೈಟ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಶಿರೂರು ನಿವಾಸಿ ತೌಸಿಫ್ (40) ಎಂದು ಗುರುತಿಸಲಾಗಿದ್ದು, ಭಟ್ಕಳದ ಆಜಾದ್ ನಗರದಲ್ಲಿ ವಾಸಿಸುತ್ತಿದ್ದರು. ಗಾಯಾಳುವನ್ನು ಭಟ್ಕಳದ ಮದೀನಾ ಕಾಲೋನಿಯ ನಿವಾಸಿ ಸೈಯದ್ ಉಮರ್ ರಶಾದ್ ಶೇಖ್ (20) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸ್ಕೂಟರ್ ಸಿಟಿ ಲೈಟ್ ಕ್ರಾಸ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಂಸುದ್ದೀನ್ ವೃತ್ತದ ಕಡೆಗೆ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ, ಉಡುಪಿಯಿಂದ ಶಿರಸಿಗೆ ವೇಗವಾಗಿ ಬರುತ್ತಿದ್ದ ಕಾರು, ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಸ್ಕೂಟರ್ ಕೆಲವು ಮೀಟರ ದೂರದಲ್ಲಿ ಬಿದ್ದ ರಭಸಕ್ಕೆ ಇಬ್ಬರೂ ಸವಾರರು ರಸ್ತೆಯ ಮಧ್ಯ ಬಿದ್ದ ಘಟನೆ ನಡೆದಿದೆ.
ಅಪಘಾತದ ನಂತರ, ಸ್ಥಳೀಯ ನಿವಾಸಿಗಳು ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿಂದ ಪ್ರಾಥಮಿಕ ಚಿಕಿತ್ಸೆಯ ನಂತರ ಮಂಗಳೂರಿಗೆ ಕರೆದೊಯ್ಯಲಾಯಿತು. ತೌಸಿಫ್ ಅವರನ್ನು ಮಂಗಳೂರಿಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ .
ಈ ಕುರಿತು ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
