ಭಟ್ಕಳ: ಕಳೆದ ಒಂದು ವಾರದ ಹಿಂದೆಷ್ಟೇ ಹೊನ್ನಾವರ ತಾಲೂಕಿನ ಚಂದಾವರ ಮೂಲದ ಮಹಿಳೆಯೊಬ್ಬರು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಭಟ್ಕಳ ರೈಲ್ವೆ ನಿಲ್ದಾಣದ ಸಮೀಪದ ಪಾಳು ಜಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಮಹಿಳೆಯು ಕಾಲು ಜಾರಿ ಬಿದ್ದು ಸಮೀಪದ ರೈಲ್ವೆ ಕಂಬಕ್ಕೆ ತಲೆ ಬಡಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪಿಎಸೈ ತಿಮ್ಮಪ್ಪ ಎಸ್. ಹಾಗೂ ಪೊಲೀಸ್ ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯಕ್,ಅವರ ಸಮ್ಮುಖದಲ್ಲಿ, ಮೃತ ಮಹಿಳೆಯ ಪತಿಯ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ನಂತರ, ಆರ್ಥಿಕ ಸಂಕಷ್ಟದ ಕಾರಣದಿಂದ ಮೃತ ಮಹಿಳೆಯ ಪತಿ ಅಂತ್ಯಸಂಸ್ಕಾರ ನಡೆಸಲು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರನ್ನು ಸಂಪರ್ಕಿಸಿ ಅಂತ್ಯಕ್ರಿಯೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮಂಜು ಮುಟ್ಟಳ್ಳಿ ಅವರು ಮೃತ ಮಹಿಳೆಯ ಪತಿಯ ಕುಟುಂಬದವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ವಿವಿಧ ಕಾರಣಗಳಿಂದ ಅವರು ಅಂತ್ಯಕ್ರಿಯೆಗೆ ಮುಂದಾಗಲು ಸಾಧ್ಯವಿಲ್ಲವೆಂದು ತಿಳಿಸಿದರು. ಈ ಸಂಕಷ್ಟದ ಸಂದರ್ಭದಲ್ಲಿ ಸಮಾಜ ಸೇವಕ ಮಂಜು ಮುಟ್ಟಳ್ಳಿ ಅವರು ತಾವೇ ಮುಂದಾಗಿ, ಲೈಫ್ ಕೇರ್ ಅಂಬುಲೆನ್ಸ್ ಮಾಲೀಕ ವಿನಾಯಕ ನಾಯ್ಕ ಅವರ ಸಹಕಾರದೊಂದಿಗೆ ಎಲ್ಲಾ ಖರ್ಚು ವೆಚ್ಚಗಳನ್ನು ಬರಸಿ, ಮೃತ ಮಹಿಳೆಯ ಪತಿಯ ಸಮ್ಮುಖದಲ್ಲೇ ಮಹಿಳೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.
ಭಟ್ಕಳ ತಾಲೂಕಿನ ಉತ್ತರಕೊಪ್ಪ ಗಾಳಿಬೈಲು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆರಳಾ ಮೂಲದ ಕಾರ್ಮಿಕನೊಬ್ಬರು ವಿಷ/ಅಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ .ಮೃತರನ್ನು ಅಪ್ಪಾಚಿ (61), ತಂದೆ ಜೋನೇಪ್ ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಅಮೀತ ಶಾನಭಾಗ ಅವರ ತೋಟದಲ್ಲಿ ಕಾರ್ಮಿಕರಾಗಿದ್ದರು. ಕಳೆದ ಕೆಲ ತಿಂಗಳಿಂದ ಒಂದು ಕಣ್ಣು ಕಾಣದೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅವಿವಾಹಿತರಾಗಿದ್ದು ಹತ್ತಿರದ ಸಂಬಂಧಿಕರು ಯಾರೂ ಇಲ್ಲದಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದರೆಂದು ತಿಳಿದುಬಂದಿದೆ.
ತಾವು ವಾಸಿಸುತ್ತಿದ್ದ ಮನೆಯಲ್ಲಿ ವಿಷಕಾರಿ ದ್ರವ್ಯ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಪೊಲೀಸರು ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.
ಮೃತರಿಗೆ ಸಂಬಂಧಿಕರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ತೋಟದ ಮಾಲೀಕ ಅಮೀತ ಶಾನಭಾಗ ಅವರು ಸಮಾಜಸೇವಕ ಮಂಜು ನಾಯ್ಕ ಅವರಲ್ಲಿ ಅಂತ್ಯಕ್ರಿಯೆಗೆ ಸಹಕಾರ ಕೋರಿದರು. ಅಂಬುಲೆನ್ಸ್ ಮಾಲೀಕ ವಿನಾಯಕ ನಾಯ್ಕ ಹಾಗೂ ಉತ್ತರಕೊಪ್ಪದ ಸ್ಥಳೀಯ ನಿವಾಸಿಗಳ ನೆರವಿನಿಂದ ಅಂತ್ಯಸಂಸ್ಕಾರ ಸೋಮವಾರ ಮದ್ಯಾಹ್ನ ನೆರವೇರಿಸಿದರು
