ಕೇಂದ್ರ ಸರ್ಕಾರದ ನರೇಗಾ ಯೋಜನೆಯ ತಿದ್ದುಪಡಿಯಿಂದಾಗಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದಂತಾಗಿದೆ: ಸಚಿವ ಮಂಕಾಳ್ ವೈದ್ಯ

Share

ಭಟ್ಕಳ: ಗ್ರಾಮೀಣ ಬಡವರ ಬದುಕಿನ ಭದ್ರತೆಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ತತ್ವ ಮತ್ತು ಕಾರ್ಯವಿಧಾನವನ್ನೇ ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆರೋಪಿಸಿದರು.


ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಬದಲಾವಣೆ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಯೋಜನೆಯನ್ನು ಇದೀಗ ದೆಹಲಿಯಿಂದ ನೇರವಾಗಿ ನಿಯಂತ್ರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳ ಅಧಿಕಾರ ಕುಂಠಿತವಾಗಲಿದ್ದು, ಗ್ರಾಮೀಣ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವ ಕಾನೂನಾತ್ಮಕ ಭರವಸೆಯೇ ಈ ಯೋಜನೆಯ ಶಕ್ತಿ. ಕೃಷಿ ಸಂಬಂಧಿತ ಕೆಲಸಗಳು, ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ಕೇಂದ್ರ ಸರ್ಕಾರದ ಈ ಬದಲಾವಣೆಗಳಿಂದ ಯೋಜನೆಯ ಉದ್ದೇಶವೇ ಮಸುಕಾಗುವ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.


ಈ ಬದಲಾವಣೆಗಳ ಪರಿಣಾಮ ದೇಶದಾದ್ಯಂತ ಕೋಟ್ಯಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲೇ ಸುಮಾರು 1 ಕೋಟಿ 70 ಲಕ್ಷ ಮಹಿಳೆಯರು ಉದ್ಯೋಗದಿಂದ ವಂಚಿತರಾಗುವ ಭೀತಿಯಿದೆ. ಇದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಭಾರೀ ಹೊಡೆತ ಬೀಳಲಿದೆ ಎಂದು ಮಂಕಾಳ ವೈದ್ಯ ಎಚ್ಚರಿಸಿದರು.
ತೆಲಂಗಾಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳಿದ್ದರೆ, ಈ ಯೋಜನೆ ರದ್ದುಗೊಳಿಸಿ ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆ ನೀಡಬೇಕು. ಆದರೆ ದೇಶದ ಎಲ್ಲ ಕಾರ್ಮಿಕರನ್ನು ಒಟ್ಟಾಗಿ ದಂಡಿಸುವುದು ಸರಿಯಲ್ಲ. ಬಡವರ ಶ್ರಮದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದಲೇ ಈ ಬದಲಾವಣೆಗಳನ್ನು ತರಲಾಗುತ್ತಿದೆ ಎಂಬ ಅನುಮಾನವೂ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆಯ ಹೆಸರಿನ ಬದಲಾವಣೆ ಹಾಗೂ ವ್ಯವಸ್ಥಾತ್ಮಕ ಪರಿವರ್ತನೆ ಕುರಿತ ಬಿಲ್ಲ್ ನ್ನು ಸಂಸತ್ತಿನಲ್ಲಿ ಸಮರ್ಪಕ ಚರ್ಚೆ ನಡೆಸದೇ ಅಂಗೀಕರಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಜನಪರ ಯೋಜನೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದು ಅವರು ಹೇಳಿದರು.
ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ನೀತಿಗಳು ಸಾರ್ವಜನಿಕ ವಲಯದ ಸಂಘ ಸಂಸ್ಥೆಗಳನ್ನು ದುರ್ಬಲಗೊಳಿಸುವ ದಿಕ್ಕಿನಲ್ಲಿ ಸಾಗುತ್ತಿವೆ. ಇದೇ ಧೋರಣೆ ಉದ್ಯೋಗ ಖಾತ್ರಿ ಯೋಜನೆಗೂ ಅನ್ವಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ರಾಜು ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿವಿಸಿಸಿ ಬ್ಯಾಂಕ್ ಜಾಲಿ ಅಧ್ಯಕ್ಷ ಮಂಜಪ್ಪ ನಾಯ್ಕ, ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!