ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಗರಡಿ ಹಿತ್ತಲುನಲ್ಲಿ ಕೊರಿಯರ್ ಸಿಬ್ಬಂದಿ ವೇಷದಲ್ಲಿ ಬಂದು ಸರಗಳ್ಳತನ ಮಾಡಿದ ಘಟನೆ ನಡೆದಿದೆ.ಭಟ್ಕಳ ತಾಲೂಕಿನ ಬೆಳಕೆಯ ಗರಡಿ ಹಿತ್ತಲುನ ನಿವಾಸಿ ಹೊನ್ನಮ್ಮ ಮಹಾದೇವ್ ನಾಯ್ಕ್ (70) ಅವರು ಚಿನ್ನದ ಸರ ಕಳೆದುಕೊಂಡ ವೃದ್ದೆಯಾಗಿದ್ದಾರೆ. ಮಾಸ್ಕ್ ಧರಿಸಿ ಬೈಕ್ ನಲ್ಲಿ ಬಂದ ಇಬ್ಬರೂ ದುಷ್ಕರ್ಮಿಗಳು ತಾವು ಕೊರಿಯರ್ ಸಿಬ್ಬಂದಿ ಎಂದು ಹೇಳಿಕೊಂಡು ನಿರ್ದಿಷ್ಟ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ವಿಳಾಸವನ್ನ ವಿಚಾರಿಸಿದ್ದಾರೆ. ಈ ಹೆಸರಿನ ವ್ಯಕ್ತಿಯು ಈ ಊರಿನಲ್ಲಿ ಯಾರೂ ಇಲ್ಲ ಎಂದು ವೃದ್ಧೆಯು ಅವರ ಬಳಿ ಹೇಳಿದ್ದಾರೆ. ನಂತರ ದುಷ್ಕರ್ಮಿಗಳು ಕುಡಿಯಲು ನೀರನ್ನು ಕೇಳಿದ್ದು, ವೃದ್ಧೆಯು ನೀರು ತಂದು ಕೊಟ್ಟಿದ್ದಾರೆ. ನಂತರ ಮತ್ತೊಮ್ಮೆ ನೀರು ಬೇಕು ಎಂದು ಕೇಳಿದ ದುಷ್ಕರ್ಮಿಗಳು ಆ ಸಮಯದಲ್ಲಿ ವೃದ್ಧೆ ಒಳಗೆ ಹೋಗುತ್ತಿದ್ದ ವೇಳೆ ಬೈಕಿನ ಹಿಂಬದಿ ಕುಳಿತಿದ್ದ ವ್ಯಕ್ತಿ ಏಕಾಏಕಿ ವೃದ್ಧೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಳೆದು ಕೊಂಡಿದ್ದಾನೆ, ಈ ಘಟನೆಯಿಂದ ವೃದ್ಧೆ ನೆಲಕ್ಕೆ ಬಿದ್ದಿದ್ದಾರೆ ಈ ನಡುವೆ ದುಷ್ಕರ್ಮಿಗಳು ಚಿನ್ನದ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ವೃದ್ಧೆಯ ಕೂಗಾಟ ಕೇಳಿದ ಸ್ಥಳೀಯರು ದುಷ್ಕರ್ಮಿಗಳ ಬೆನ್ನಟ್ಟಿಲು ಪ್ರಯತ್ನಿಸಿದರು ಅವರು ತಿರು ಸಿರು ಶಿರೂರ್ ಟೋಲ್ ಗೇಟ್ ಮಾರ್ಗವಾಗಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಡಿವೈಎಸ್ಪಿ ಮಹೇಶ್ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಭಟ್ಕಳದಲ್ಲಿ ಕೊರಿಯರ್ ಸಿಬ್ಬಂದಿ ವೇಷದಲ್ಲಿ ಬಂದು ಸರಗಳ್ಳತನ
