ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ವಿದ್ಯಾರ್ಥಿಗಳ ಚಿತ್ತ
ಭಟ್ಕಳ: ಭಟ್ಕಳದ ತರ್ಬಿಯತ್ ಎಜುಕೇಶನ್ ಸೊಸೈಟಿಯ (Tarbiyat Education Society) ಅಡಿಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಶಮ್ಸ್ ಪದವಿ ಪೂರ್ವ ಕಾಲೇಜ್ (Shams PU College) ನವೆಂಬರ್ 20, ಗುರುವಾರದಂದು
ಎರಡನೇ ವಿಜ್ಞಾನ ಮೇಳವನ್ನು ಆಯೋಜಿಸಿದೆ ಎಂದು ಶಮ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಯಾಖತ್ ಅಲಿ ಹೇಳಿದರು.
ಅವರು ಮಂಗಳವಾರ ಡಾ.ಎಂ.ಟಿ.ಹಸನ್ ಬಾಪಾ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಟ್ಕಳ ಸೈನ್ಸ್ ಫೇರ್ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಶಮ್ಸ್ ಕಾಲೇಜು ಆಯೋಜಿಸಿರುವ ಈ ವಿಜ್ಞಾನ ಮೇಳದ ಮುಖ್ಯ ಉದ್ದೇಶವು ಕೇವಲ ವಿಜ್ಞಾನ ಮಾದರಿಗಳನ್ನು
ಪ್ರದರ್ಶಿಸುವುದಲ್ಲ. ಬದಲಿಗೆ, ವಿದ್ಯಾರ್ಥಿಗಳು ಸಮಾಜವು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಬೇಕು, ಅವುಗಳ ಕುರಿತು ಸಂಶೋಧನಾ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸಿ ಪರಿಹಾರಗಳನ್ನು ಹೊರತರುವಂತೆ ಮಾಡುವುದು ಇದರ ಗುರಿಯಾಗಿದೆ. ಶಿಕ್ಷಣವು ಕೇವಲ ಪಠ್ಯಪುಸ್ತಕಗಳು ಮತ್ತು ತರಗತಿ ಕೋಣೆಗಳಿಗೆ ಸೀಮಿತವಾಗಬಾರದು ಎಂಬ ದೃಷ್ಟಿಕೋನದಿಂದ ಇದನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಶಮ್ಸ್ ಪಿಯು ಕಾಲೇಜ್ ಆಡಳಿತ ಪ್ರಾಂಶುಪಾಲ ಮುಹಮ್ಮದ್ ರಝಾ ಮಾತನಾಡಿ, ಶಮ್ಸ್ ಪದವಿ ಪೂರ್ವ ಕಾಲೇಜು ರಾಯಚೂರಿನ ಎಜೆ ಅಕಾಡೆಮಿ ಆಫ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ನ (AJ Academy of Research and Development) ಸಹಯೋಗದೊಂದಿಗೆ ಈ ವಿಜ್ಞಾನ ಮೇಳವನ್ನು ಆಯೋಜಿಸಿದೆ.
ಈ ಮೇಳಕ್ಕಾಗಿ ಭಟ್ಕಳ ತಾಲ್ಲೂಕಿನ ಶಾಲೆ-ಕಾಲೇಜುಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು 155 ತಂಡಗಳು
ನೋಂದಾಯಿಸಿದ್ದು, ಅದರಲ್ಲಿ 46 ತಂಡಗಳನ್ನು ಆಯ್ಕೆ ಮಾಡಿ, ಅವರಿಗೆ ಸಂಶೋಧನೆಯನ್ನು ಹೇಗೆ ಮುಂದುವರಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವರದಿಗಳನ್ನು ಮತ್ತು ಸಂಶೋಧನೆಗಳ ಫಲಿತಾಂಶಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಾಮಾನ್ಯವಾಗಿ ವಿಜ್ಞಾನ ಪ್ರದರ್ಶನಗಳಲ್ಲಿ ಹಳೆಯ ಮಾದರಿಗಳನ್ನು ತಂದು ಇರಿಸಲಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಸಂಶೋಧನೆ ನಡೆಸಿರುವ ಫಲಿತಾಂಶಗಳು ನವೆಂಬರ್ 20 ರಂದು ಹೊರಬರಲಿವೆ. ಈ ಸಂಶೋಧನಾ ಕಾರ್ಯವು ಸುಮಾರು ಎರಡು ತಿಂಗಳ ಹಿಂದೆ ಆರಂಭಗೊಂಡಿದೆ ಎಂದರು. ವಿಜ್ಞಾನ ಮೇಳದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9:30 ಕ್ಕೆ ನಡೆಯಲಿದ್ದು ಅಂಜುಮನ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ
ಡಾ. ಮುಹಮ್ಮದ್ ಝುಬೇರ್ ಕೋಲಾ ಮುಖ್ಯ ಅತಿಥಿಯಾಗಿ ಮತ್ತು ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ್ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ. ಮಹಿಳೆಯರಿಗಾಗಿ ಮಧ್ಯಾಹ್ನ 2:00 ರಿಂದ 3:30 ರವರೆಗೆ. ಪುರುಷರಿಗಾಗಿ ಸಂಜೆ 3:30 ರಿಂದ 5:00 ರವರಗೆ ಸಮಯ ನಿಗದಿಪಡಿಸಲಾಗಿದೆ.
ಈ ಸಂಶೋಧನಾ ಆಧಾರಿತ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉತ್ತೇಜಿಸಲು ‘ವಿಜ್ಞಾನಿ ಪ್ರಶಸ್ತಿ’ (Scientist Award), ‘ಬಡ್ಡಿಂಗ್ ಸೈಂಟಿಸ್ಟ್’ ಮತ್ತು ‘ಎಮರ್ಜಿಂಗ್ ಸೈಂಟಿಸ್ಟ್’ ನಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ. ಭಟ್ಕಳದ ಎಲ್ಲಾ ಶಿಕ್ಷಣ ಸಂಸ್ಥೆಗಳು, ಪೋಷಕರು ಮತ್ತು ಸಾರ್ವಜನಿಕರು ಈ ಮೇಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಮತ್ತು ಅವರನ್ನು ಪ್ರೋತ್ಸಾಹಿಸುವ ಮೂಲಕ ಈ ಸಂಶೋಧನೆಯನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.
