
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಕಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಾರಿಸು ಕನ್ನಡ ಡಿಂಡಿಮ.
ಮಂಕಿ:ದಿನಾಂಕ 11.11.2025 ಮಂಗಳವಾರ ದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಕಿ ಇಲ್ಲಿ ನಡೆದಂತಹ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡಾಂಬೆಯ ಜಾತ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಕೈಯಲ್ಲಿ ಹಿಡಿದು ಕನ್ನಡ ಮಾತೆಗೆ ಜೈಕಾರ ಕೂಗುತ್ತಾ ಮುನ್ನಡೆದರು. ಜಾತ ಕಾರ್ಯಕ್ರಮದ ನಂತರ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ “ಬಾರಿಸು ಕನ್ನಡ ಡಿಂಡಿಮ” ಎಂಬ ಗೋಡೆ ಪತ್ರಿಕೆಯನ್ನು ಅನಾವರಣಗೊಳಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಅಬ್ದುಲ್ ಮಜೀದ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕನ್ನಡ ಭಾಷೆಯು ಎಲ್ಲಾ ಭಾಷೆಗಳಿಗಿಂತ ಸುಲಲಿತ, ಸುಮಧುರ ಹಾಗೂ ನಮ್ಮ ಕರ್ನಾಟಕದ ಮಾತೃಭಾಷೆ ಅಲ್ಲದೆ ಅದು ತನ್ನದೇ ಆದ ವಿಶಿಷ್ಟತೆಗಳೊಂದಿಗೆ ಪ್ರಪಂಚದಾದ್ಯಂತ ಗುರುತಿಸಿಕೊಂಡಿದೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗನು ಆಚರಣೆಗಳಷ್ಟೇ ಕನ್ನಡದ ಹಬ್ಬವನ್ನು ಮಾಡದೆ ನಿತ್ಯೋತ್ಸವವಾಗಿ ಕನ್ನಡದ ಬಳಕೆ ಆಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದಂತಹ ಶ್ರೀಮತಿ ಜಯಶ್ರೀ, ಕನ್ನಡ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಹಿನ್ನೆಲೆ , ಕನ್ನಡ ಭಾಷೆಯ ಇತಿಹಾಸ, ಕನ್ನಡ ಭಾಷೆಯ ಮಹತ್ವ ಹಾಗೂ ಪ್ರಾಚೀನತೆಯನ್ನು ತಿಳಿಸುವುದರೊಂದಿಗೆ ನಮ್ಮ ಕರ್ನಾಟಕವು ಭೌಗೋಳಿಕ, ಸಾಹಿತಿಕ, ಸಾಂಸ್ಕೃತಿಕ ಸಂಪ್ರದಾಯಗಳನ್ನು ರೂಡಿಸಿಕೊಂಡು ಬಂದಿರುವಂತಹ ವಿಚಾರಗಳನ್ನ ತಿಳಿಸಿದರು.

ನಮ್ಮ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೇನೆಂಬುದನ್ನು ತಿಳಿಸಿಕೊಟ್ಟರು.ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶದ ಸಂಚಾಲಕರಾದ ಶ್ರೀಯುತ ರಾಘವೇಂದ್ರ ಮಂಜು ಪೂಜಾರಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕನ್ನಡ ಭಾಷೆಯು ವಿಶ್ವ ಲಿಪಿಗಳ ರಾಣಿ ಎಂದು ತಿಳಿಸುತ್ತಾ, ಕನ್ನಡ ಹಾಗೂ ಕರ್ನಾಟಕವು ಹಲವು ಬಗೆಗಳಲ್ಲಿ ಪ್ರಥಮವೆಂದು ಹಾಗೂ ಕುರಿತೋದೆಯೇ ಕಾವ್ಯಗಳನ್ನು ರಚಿಸುವಂತಹ ಪರಿಣಿತಿಯನ್ನು ನಮ್ಮ ಕನ್ನಡಿಗರು 9ನೇ ಶತಮಾನದಲ್ಲಿಯೇ ಪಡೆದಿದ್ದರು ಎಂದು ತಿಳಿಸುತ್ತಾ ಕವಿರಾಜಮಾರ್ಗದ ಪದ್ಯಗಳಲ್ಲಿನ ಕನ್ನಡ ಭಾಷೆಯ ಹಿರಿಮೆಯನ್ನು ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿಯಾದ ಲತಾ ಮಾತನಾಡಿ ಕರ್ನಾಟಕ ಏಕೀಕರಣಗೊಂಡ ಬಗ್ಗೆ ಅದರ ಹಿನ್ನೆಲೆ ಹಾಗೂ ನಡೆದು ಬಂದ ಹಾದಿಯನ್ನು ತಿಳಿಸಿಕೊಟ್ಟರು.

70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ , ಹಾಡುಗಾರಿಕೆ, ಪ್ರಬಂಧ ಸ್ಪರ್ಧೆ ಚಿತ್ರಕಲೆ ಹಾಗೂ ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುವುದರೊಂದಿಗೆ ಉತ್ತೇಜಿಸಲಾಯಿತು.

ವಿದ್ಯಾರ್ಥಿಗಳಾದ ವರ್ಷಿತಾ ಮತ್ತು ನಯನ ಕಾರ್ಯಕ್ರಮವನ್ನು ನಿರೂಪಿಸಿದರು . ಕುಮಾರಿ ಚಂದ್ರಿಕಾ ಪ್ರಾರ್ಥನಾ ಗೀತೆಯನ್ನು ಹಾಡಿದಳು. ವಿದ್ಯಾರ್ಥಿಯಾದ ಪವನ್ ನಾಯ್ಕ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದನು. ಕುಮಾರಿ ಪ್ರತೀಕ್ಷಾ ವಂದನಾರ್ಪಣೆ ನಿರ್ವಹಿಸಿದಳು. ಕಾಲೇಜಿನ ಅಧ್ಯಾಪಕ ವೃಂದದವರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
