ವಾಹನ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಹೊಡೆದಾಟ: ಪೊಲೀಸ್ ಕೇಸ ದಾಖಲು

Share

ವಾಹನ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ನಡುವೆ ಹೊಡೆದಾಟ: ಪೊಲೀಸ್ ಕೇಸ ದಾಖಲು

ಭಟ್ಕಳ: ಮದುವೆ ರಿಸೆಪ್ಶನ್ ಗೆಂದು ಬಂದಿದ್ದ ಯುವಕರ ನಡುವೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ತೀವ್ರಗೊಂಡು, ಅದು ನಡು ರಸ್ತೆಯಲ್ಲೇ ಜಗಳವಾಗಿ ಮಾರ್ಪಟ್ಟ ಘಟನೆ ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯಿತ್ ವ್ಯಾಪ್ತಿಯ ಹನೀಫಾಬಾದ್‌ನ ಮದುವೆ ಹಾಲ್ ಒಂದರ ಎದುರುಗಡೆಯಲ್ಲಿ ನಡೆದಿದೆ.
ಹೊಡೆದಾಟದಲ್ಲಿ ಐದಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹನೀಫಾಬಾದ್‌ನ ಮದುವೆ ಹಾಲ್‌ನಲ್ಲಿ ಮದುವೆ ರಿಸಪ್ಷನ್ ನಡೆಯುತ್ತಿದ್ದ ಸಂದರ್ಭದಲ್ಲಿ ವಾಹನ ಪಾರ್ಕಿಂಗ್ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು ಸ್ವಲ್ಪ ಸಮಯದಲ್ಲಿಯೇ ಅದು ತೀವ್ರಗೊಂಡು ವಾಗ್ವಾದ ಮುಂದುವರಿದು, ಆರೋಪಿತರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ನಂತರ ಹೊಡೆದಾಟಕ್ಕೂ ಇಳಿದಿದ್ದಾರೆ ಎಂದು ವಾಟ್ಸಪ್ ಗಳಲ್ಲಿ ಹರಿದಾಡುವ ವಿಡಿಯೋದಿಂದ ಸ್ಪಷ್ಟವಾಗುತ್ತದೆ.


ಘಟನೆಯ ಮಾಹಿತಿ ತಿಳಿದ ತಕ್ಷಣ ಭಟ್ಕಳ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಜಗಳ ಶಮನಕ್ಕೆ ಮುಂದಾದರೂ, ಆರೋಪಿತರು ಪೊಲೀಸರ ಮಾತು ಕೇಳದೆ ಹೊಡೆದಾಟ ಮುಂದುವರೆಸಿದ ಪರಿಣಾಮ ಕೆಲವರು ಗಾಯಗೊಂಡಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಗಂಭೀರ ಸ್ವರೂಪದ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣ ತಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಹನೀಫಾಬಾದ್‌ನ ಉಜೇಫ್ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಂ.ಜೆ. ಮಂಜೂರ ಎಂ.ಎನ್., ಆಜಾದನಗರ ೬ನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ಇವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!