ಭಟ್ಕಳ: ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ದಿ. ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಂಸ್ಥೆಯು ಕಳೆದ ವರ್ಷ ರೂ.209 ಕೋಟಿಯ ಠೇವಣಿ ಮೊತ್ತವನ್ನು ಕಾಯ್ದುಕೊಂಡು, ರೂ.3 ಕೋಟಿ 28 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ಈ ಬಾರಿ ಶೇ.10ರಂತೆ ಲಾಭಾಂಶ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.

40 ವರ್ಷಗಳ ಹಿಂದೆ ಮಾಜಿ ಶಾಸಕರಾದ ಡಾ. ಚಿತ್ತರಂಜನ್ ಹಾಗೂ ಹಿರಿಯರ ಪ್ರಯತ್ನದಿಂದ ಹುಟ್ಟಿದ ಈ ಸಂಘ ಇಂದು ಸದೃಢ ಆರ್ಥಿಕ ಸಂಸ್ಥೆಯಾಗಿ ಬೆಳೆದಿದೆ. ಸದಸ್ಯರು ಮತ್ತು ಠೇವುದಾರರ ವಿಶ್ವಾಸ ಹಾಗೂ ಬೆಂಬಲವೇ ಈ ಸಾಧನೆಯ ಮೂಲ” ಎಂದು ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಹೇಳಿದರು.

ಪ್ರಸ್ತುತ ಸಂಘವು ಪ್ರಧಾನ ಕಚೇರಿ ಸೇರೆದು 17 ಶಾಖೆಗಳನ್ನು ಹೊಂದಿದೆ. ಸಂಘದಲ್ಲಿ 32,876 ಶೇರುದಾರ ಸದಸ್ಯರಿದ್ದು, ಒಟ್ಟಾರೆ ಸದಸ್ಯರ ಸಂಖ್ಯೆ 33,991ಕ್ಕೆ ತಲುಪಿದೆ. ಸಂಘದ ಶೇರು ಬಂಡವಾಳ ರೂ.11 ಕೋಟಿ 30 ಲಕ್ಷವಾಗಿದ್ದು, ಸದಸ್ಯರಿಂದ ರೂ.224 ಕೋಟಿ ಸಾಲ ಬಾಕಿಯಾಗಿದೆ.
ಸಂಘವು ತನ್ನ ಲಾಭಾಂಶದ ಒಂದು ಭಾಗವನ್ನು ಶಿಕ್ಷಣ ಸಂಸ್ಥೆಗಳು, ಬಡ ಹಾಗೂ ರೋಗಪೀಡಿತರಿಗೆ ನೆರವು, ಮನೆ-ಆಸ್ತಿ ಕಳೆದುಕೊಂಡ ಸದಸ್ಯರಿಗೆ ಪರಿಹಾರ, ದೇವಸ್ಥಾನ ಜೀರ್ಣೋದ್ಧಾರ, ಕ್ರೀಡೆ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೂ ಧನ ಹಾಗೂ ವಸ್ತು ಸಹಾಯ ರೂಪದಲ್ಲಿ ಬಳಸಿ ಬಂದಿದೆ.

ಈ ಸಂದರ್ಭ ಬ್ಯಾಂಕಿನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಅಲ್ಬರ್ಟ ಡಿಕೋಸ್ತಾ, ಲಕ್ಷ್ಮೀ ಮಾದೇವ ನಾಯ್ಕ, ಪ್ರ.ಕಾ. ವಿನಯ ನಾಯ್ಕ ಸೇರಿದಂತೆ ನೂರಾರು ಸದಸ್ಯರು ಹಾಜರಿದ್ದರು.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ.