ಭಟ್ಕಳ : ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ಶಿರಾಲಿ ಇದರ 26 ನೇ ವಾರ್ಷಿಕ ಮಹಾಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಸೆಪ್ಟೆಂಬರ್ 14 ರಂದು ಜರುಗಿತು. ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಪೈ ಯವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘವು ಪ್ರಸಕ್ತ ಸಾಲಿನಲ್ಲಿ 116 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ.103.62 ಕೋಟಿ ಸಾಲವನ್ನು ನೀಡಿ 98.49% ಸಾಲ ವಸೂಲಾತಿಯೊಂದಿಗೆ ಸುಮಾರು 2.53 ಕೋಟಿಗೂ ಮಿಕ್ಕಿ ಲಾಭಗಳಿಸಿ ಸುಧೃಢವಾಗಿದೆ ಎನ್ನುತ್ತಾ ಸದಸ್ಯರಿಗೆ 12% ಲಾಭಾಂಶ ಘೋಷಿಸಿದರು.

ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ 14 ವರ್ಷ ಗಳಿಂದ ಸಂಘವು “ಅ” ದರ್ಜೆ ಪಡೆದಿದೆ ಎನ್ನುತ್ತಾ ಪ್ರತಿ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಗರಿಷ್ಟ ಅಂಕ ಪಡೆದ 31 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು. ಶ್ರೀ ಅಶೋಕ ಪೈ ಇವರು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಭಟ್ಕಳ ಶಾಖೆಯು ಅತ್ಯುತ್ತಮ ಪ್ರಗತಿ ಸಾಧಿಸಿದ್ದು ಪ್ರಬಂಧಕರಾದ ಪ್ರಸನ್ನ ಪ್ರಭುರವರು ತಮ್ಮ ಅವಧಿಯಲ್ಲಿ 99.92% ಸಲ ವಸೂಲಾತಿಯೊಂದಿಗೆ ಶಾಖೆಗೆ ಉತ್ತಮ ಲಾಭಾಂಶವನ್ನು ತಂದುಕೊಟ್ಟಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕರಾದ ನಾಗೇಶ ಪೈರವರು ಮಾತನಾಡುತ್ತ ಶ್ರೀಯುತ ಅಶೋಕ ಪೈ ಇವರು ಸತತ 25 ವರ್ಷಗಳಿಂದ ನಮ್ಮ ಸಂಘದ ಅಧ್ಯಕ್ಷರಾಗಿ ನೀಡಿದ ನಿಸ್ವಾರ್ಥ ಸೇವೆ ಹಾಗೂ ಪಟ್ಟ ಶ್ರಮ ಶ್ಲಾಘನಾರ್ಹ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘದ ಶೇರುದಾರ ಬಾಂಧವರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿ, ಸಂಘದ ಆಡಳಿತ ಮಂಡಳಿಯು ನೀಡಿದ ಪ್ರಾಮಾಣಿಕ, ನಿಸ್ವಾರ್ಥಸೇವೆ ಹಾಗೂ ಸಿಬ್ಭಂದಿಗಳ ಶ್ರಮವನ್ನು ಶ್ಲಾಘಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ರಾಜೇಂದ್ರ ಶಾನಭಾಗ ವಿಷಯವನ್ನು ಮಂಡಿಸಿ, ಪೋಟ್ ನಿಯಮದ ತಿದ್ದುಪಡಿಗೆ ಮಂಜೂರಾತಿಯನ್ನು ಪಡೆದರು. ಪ್ರಾರಂಭದಲ್ಲಿ ಸಂಘದ ನಿರ್ದೇಶಕರಾದ ವಾಮನ ಕಾಮತ ಸ್ವಾಗತಿಸಿದರೆ, ಕೊನೆಯಲ್ಲಿ ರವೀಂದ್ರ ಪ್ರಭು ಸಾಂದರ್ಭಿಕವಾಗಿ ಮಾತನಾಡುತ್ತ ಮುಂದಿನ ಮಹಾ ಸಭೆಯು ನಮ್ಮ ಸ್ವಂತ ಕಟ್ಟಡದಲ್ಲಿ ಜರುಗಲಿದೆ ಎನ್ನುತ್ತಾ ವಂದನಾರ್ಪಣೆಗೈದರು. ಸಿಬ್ಬಂದಿ ಶ್ಯಾಮಸುಂದರ್ ಪ್ರಭು ಪ್ರಾರ್ಥಿಸಿದರೇ, ಭಟ್ಕಳ ಶಾಖೆಯ ಪ್ರಬಂಧಕರಾದ ಪ್ರಸನ್ನ ಪ್ರಭುರವರು ಸಭೆಯ ಕಾರ್ಯಕಲಾಪವನ್ನು ನಿರ್ವಹಿಸಿದರು.
ವರದಿ: ಉಲ್ಲಾಸ್ ಶಾನಭಾಗ್ ಶಿರಾಲಿ.