
ಭಟ್ಕಳ: ತಾಲೂಕಿನ ಚಿತ್ರಾಪುರ ಮಠದ ಸತ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 29 ನೇ ಚಾತುರ್ಮಾಸ್ಯದ ಸೀಮೋಲಂಘನವು ಅನಂತ ಚತುರ್ದಶಿಯ ದಿನವಾದ ಶನಿವಾರದಂದು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಶನಿವಾರ ಬೆಳಿಗ್ಗೆಯಿಂದ ಅನಂತ ಚತುರ್ದಶಿ ವ್ರತದ ಪ್ರಯುಕ್ತ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಗಳ ಅಮೃತ ಹಸ್ತದಿಂದ ಕಳಸ ಸ್ಥಾಪನೆ ಹಾಗೂ ಪೂಜೆ ನೆರವೇರಿತು. ನಂತರ ಕ್ಷಮೆಯಾಚನೆ, ಮಠದ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷೀಯ ಭಾಷಣ, ಗುರುವರ್ಯರಿಂದ ಬಂದಂತಹ ಭಕ್ತಾದಿಗಳಿಗೆ ಆಶೀರ್ವಚನ, ಪಾದಪೂಜೆ, ತೀರ್ಥ ಪ್ರಸಾದ ವಿತರಣೆ ತದನಂತರ ನೆರೆದಂತ ಭಕ್ತಾದಿಗಳಿಗೆ ಮಹಾಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರೀ ಸಮುದಾಯ ಭವನದಲ್ಲಿ ಚಾತುರ್ಮಾಸ್ಯದ ಗುರು ಪೂಜೆ ನಂತರ ಶ್ರೀಗಳು ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ಅಲ್ಲಿಂದ ಬೋಟಿನ ಮೂಲಕ ಹೆಬ್ಬಳೆ ದೇವರ ದರ್ಶನ ಪಡೆದು ಪುನಃ ಬಂದು ಅಳ್ವೆಕೋಡಿಯ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಶ್ರೀಗಳು ಶಿರಾಲಿಯ ಶ್ರೀ ಮಹಾಗಣಪತಿ ಮಹಾಮಾಯಿ ದೇವರ ದರ್ಶನ ಪಡೆದು ಅಲ್ಲಿಯ ಆಡಳಿತ ಮಂಡಳಿಯವರಿಂದ ಪಾದುಕ ಪೂಜೆ ಸ್ವೀಕರಿಸಿ, ಶ್ರೀಗಳು ಆಶೀರ್ವಚನ ನೀಡಿದರು. ತದನಂತರ ಶ್ರೀಗಳವರ ಬೃಹತ್ ಶೋಭಾ ಯಾತ್ರೆ ಶ್ರೀ ಮಹಾ ಗಣಪತಿ ಮಹಾಮಾಯಿ ದೇವಸ್ಥಾನದ ಮೂಲಕ ಹೊರಟು ಟ್ಯಾಬ್ಲೋ,ಛದ್ಮವೇಷ, ವಿವಿಧ ರೀತಿಯ ವೇಷ ಭೂಷಣ,ಡೊಳ್ಳು ಕುಣಿತ, ಚಂಡೆವಾದ್ಯ ದೊಂದಿಗೆ ಚಿತ್ರಾಪುರ ಮಠಕ್ಕೆ ಶ್ರೀಗಳು ಪುರ ಪ್ರವೇಶ ಮಾಡಿದರು.

ಶ್ರೀ ಗುರುಗಳ ಸೀಮೋಲಂಘನ ಕಾರ್ಯಕ್ರಮದಲ್ಲಿ ಚಿತ್ರಪುರ ಮಠದ ಆಡಳಿತ ಮಂಡಳಿ ಪ್ರಮುಖರು, ಶ್ರೀ ಮಠದ ವ್ಯವಸ್ಥಾಪಕರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.