
ಭಟ್ಕಳ ಪುರಸಭೆ ಹಳೆ ಬಸ್ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಲು ತಯಾರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೀನು ಮಾರಾಟಗಾರರು ಹಾಗೂ ಅಂಗಡಿಕಾರರು ಆಡಳಿತ ಸೌದಲ್ಲಿ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸದಂತೆ ಆಗ್ರಹಿಸಿ ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಮೀನುಗಾರ ಮಹಿಳೆ ಕಲ್ಯಾಣಿ ಮೊಗೇರ ಮಾತನಾಡಿ ರಾಜಾಂಗಣ ಮೀನು ಮಾರುಕಟ್ಟೆಯಿಂದ ನಮ್ಮನ್ನು ತೆರವುಗೊಳಿಸಲು ಅಧಿಕಾರಿಗಳು ಪೋಲಿಸರು ಬಂದರೆ ಏಚ್ಚರ, ನಾವು ಪ್ರಾಣವನ್ನಾದರೂ ಬಿಡುತ್ತೇವೆ ಹಳೆ ಮೀನು ಮಾರುಕಟ್ಟೆಯನ್ನು ಬಿಡಲು ಸಾಧ್ಯವೆ ಇಲ್ಲ ಎಂದರು.
ಪುರಸಭೆ ಮಾಜಿ ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ ಈ ಹಿಂದೆ ಮೀನು ಮಾರುಕಟ್ಟೆ ಹಲವು ಬಾರಿ ನವಿಕರಣಗೊಳಿಸಲಾಗಿದ್ದು ಹಾಗೇ ನವಿಕರಿಸುವಾಗ ಲೀಖಿತವಾಗಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವವರಿಗೆ ನವಿಕರಣದ ನಂತರ ಜಾಗ ಬಿಟ್ಟುಕೊಡುವ ಭರವಸೆ ನೀಡಿದ್ದರು. ಇಗಲೂ ಹಾಗೇ ಮಾಡಬೇಕು ಎಂದರು.
ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರ ಭಾಗದ ರಾಜಾಂಗಣದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಮೀನು ಮಾರುಕಟ್ಟೆಯಿದ್ದು, 150 ರಿಂದ 200 ಮಹಿಳಾ ಹಾಗೂ ಪುರುಷ ಮೀನು ಮಾರಾಟಗಾರರು ಮೀನು ಮಾರುತ್ತ ಬಂದಿರುತ್ತಾರೆ. ಈ ಮೀನು ಮಾರುಕಟ್ಟೆಯನ್ನು ಅವಲಂಬಿಸಿ ಹಿಂದಿನಿಂದಲೂ ಹಲವು ತರಕಾರಿ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು ಹಂಪಲ ಹಾಗೂ ಇನ್ನಿತರ ಆಹಾರ ಪದಾರ್ಥಗಳ ಅಂಗಡಿ ಮುಗ್ಗಟ್ಟುಗಳು ಹಾಗೂ ರಿಕ್ಷಾ ಚಾಲಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿರುತ್ತಾರೆ. ಈ ಪುರಾತನ ಮೀನು ಮಾರುಕಟ್ಟೆಯನ್ನು ಈ ಹಿಂದೆಯೂ ಕಾಲಕಾಲಕ್ಕೆ ನವೀಕರಣಗೊಳಿಸಿ ಅದೇ ಜಾಗದಲ್ಲಿ ಮುಂದುವರೆಸಿಕೊಂಡು ಬರಲಾಗಿದೆ. ರಾಜಾಂಗಣ ಮಾರುಕಟ್ಟೆ ವ್ಯವಸ್ಥೆಯು ಹಿಂದಿನಿಂದಲೂ ಎಲ್ಲಾ ರೀತಿಯ ಆಹಾರ ಪದಾರ್ಥಗಳ ವ್ಯಾಪಾರ ಕೇಂದ್ರವಾಗಿದ್ದು, ಎಲ್ಲರೂ ಯಾವುದೇ ಪಕ್ಷಭೇದ, ಧರ್ಮಭೇದವಿಲ್ಲದೇ ವ್ಯಾಪಾರ ನಡೆಸಿಕೊಂಡು ಸೌಹಾರ್ದಯುತವಾಗಿ ಬಂದಿರುತ್ತಾರೆ.
ಆದರೆ ಪುರಸಭೆಯು ಇತ್ತೀಚೆಗೆ ಈ ಮೀನು ಮಾರುಕಟ್ಟೆಯನ್ನು ಸಂತೆ ಮಾರುಕಟ್ಟೆಯಲ್ಲಿರುವ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲು ಪ್ರಕಟಣೆಯನ್ನು ಹೊರಡಿಸಿದೆ. ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪುರಸಭೆಯ ಅಧಿಕಾರಿಗಳು ಯಾವುದೇ ಮುಂಚಿತ ಸಭೆ ಕರೆದು ಚರ್ಚೆ ನಡೆಸಿರುವುದಿಲ್ಲ. ಈಗಾಗಲೇ 60 ಜನ ಮೀನು ಮಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಮೀನು ಮಾರುಕಟ್ಟೆಗೆ ರಸ್ತೆಯ ಬದಿಯಲ್ಲಿ, ಮುಖ್ಯವೃತ್ತದಲ್ಲಿ ಮೀನು ಮಾರಾಟ ಮಾಡುವವರನ್ನು ಅಲ್ಲಿಗೆ ಸ್ಥಳಾಂತರಿಸುವುದರ ಬದಲು 150 ರಿಂದ 200 ಜನ ಮೀನು ಮಾರಾಟ ಮಾಡುವ ಹಳೇ ಬಸ್ ನಿಲ್ದಾಣದ ಮೀನು ಮಾರಾಟ ಮಾಡುವವರನ್ನು ದುರುದ್ದೇಶಪೂರ್ವಕವಾಗಿ ಸ್ಥಳಾಂತರಿಸಲು ನಿಶ್ಚಯಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮೀನು ಮಾರಾಟಗಾರ ಮಹಿಳೆ ಕಲ್ಯಾಣಿ ಮೊಗೇರ, ರಾಮಣ್ಣ ಬಳೆಗಾರ, ವಿವೇಕ ನಾಯ್ಕ ಮತ್ತಿತರರು ಇದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.