
- ಫೋಟೋ ದೊಂದಿಗೆ ಟ್ವಿಟ್ ತೆಂಗಿನ ಗುಂಡಿ ಕ್ರಾಸ್ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆಗೆ ಇತಿಶ್ರೀ ಹಾಡಿದ ಹೆಬಳೆ ಗ್ರಾಮ ಪಂಚಾಯತ್ ಸದಸ್ಯ ಸೈಯದ್ ಅಲಿ. ಮುಖ್ಯಮಂತ್ರಿ ಗಮನಕ್ಕೆ ತೆಂಗಿನಗುಂಡಿ ಕ್ರಾಸ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ತ್ವರಿತ ಕ್ರಮಕ್ಕೆ ಸೂಚನೆ
ಭಟ್ಕಳ ದಿಂದ ಹಾದುಹೋದ ಎನ್ ಹೆಚ್ 66 ಕ್ಕೆ ಹೊಂದಿಕೊಂಡಿರುವ ತೆಂಗಿನಗುಂಡಿ ಕ್ರಾಸ್ ರಸ್ತೆ, ಚರಂಡಿ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಸದಸ್ಯರೋರ್ವರು ಟ್ವಿಟ್ ಮೂಲಕ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳ ಕಾರ್ಯಾಲಯದ ಸೂಚನೆ ಮೇರೆಗೆ ಭಟ್ಕಳದ ಪುರಸಭೆ ಈಗ ಅಗತ್ಯ ಕ್ರಮಕ್ಕೆ ಮುಂದಾಗಿದೆ.

ಕಾರ್ಮಿಕರೊಂದಿಗೆ ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧಿಕಾರಿಗಳು, ತೆಂಗಿನ ಗುಂಡಿ ಕ್ರಾಸ್ ಸಮಸ್ಯೆಗೆ ಸುತ್ತಮುತ್ತಲಿನ ಮನೆಯವರು ಅಕ್ರಮವಾಗಿ ಶೌಚಾಲಯ, ಸ್ಥಾನ ಗೃಹದ ನೀರನ್ನು ನೇರವಾಗಿ ರಸ್ತೆ ಬದಿಯ ಚರಂಡಿಗೆ ಬಿಡುವುದನ್ನು ನಿಲ್ಲಿಸುವಂತೆ ತಾಕಿತು ಮಾಡಿದ್ದಾರೆ. ಇಂತಹ ಅಕ್ರಮ ಸಂಪರ್ಕದ ಕಾರಣದಿಂದ ತ್ಯಾಜ್ಯದ ನೀರು ಚರಂಡಿಯಲ್ಲಿ ತುಂಬಿ ಮುಂದಕ್ಕೆ ಮನೆಯ ಆವರಣಕ್ಕೆ ಬಾರದಿರುವಂತೆ ತಪ್ಪಿಸಲು ಕೆಲವು ಕಡೆ ಅಲ್ಲಲ್ಲಿ ಚರಂಡಿಯನ್ನು ಬಂದ್ ಮಾಡಲಾಗಿದೆ, ಇದರ ಪರಿಣಾಮ ಮಳೆಗಾಲದಲ್ಲಿ ಸಮರ್ಪಕವಾಗಿ ನೀರು ಚರಂಡಿಯಲ್ಲಿ ಹರಿಯದೇ ರಸ್ತೆ ಕೆರೆಯಾಗಿ ಮಾರ್ಪಾಡಾಗುತ್ತದೆ.
ಜನರು ತಮ್ಮ ತಮ್ಮ ಮನೆಯ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕಿಗೆ ಬಿಡಬೇಕು ಹಾಗೂ ಎರಡು ದಿನದ ಕಾಲಾವಕಾಶಗಳಲ್ಲಿ ಚರಂಡಿ ಅಕ್ರಮ ಸಂಪರ್ಕ ತೆಗೆಯಬೇಕೆಂದು ಪುರಸಭಾ ಅಧಿಕಾರಿಗಳು ಸೂಚಿಸಿದ್ದಾರೆ.
ಚರಂಡಿ ಸಮಸ್ಯೆ ಬಗೆಹರಿದ ನಂತರ ಆದಷ್ಟು ತ್ವರಿತ ಗತಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಸಲು ಪುರಸಭೆ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಖಚಿತಪಡಿಸಿರುವ ಪುರಸಭೆ ಮುಖ್ಯ ಅಧಿಕಾರಿ ವೆಂಕಟೇಶ ನಾವುಡಾ ಕಳೆದ ಕೆಲವು ದಿನಗಳಿಂದ ಜನರು ಸಮಸ್ಯೆಯ ಬಗ್ಗೆ ಹೇಳಿಕೊಂಡಿರುತ್ತಾರೆ ಈಗ ಸಾರ್ವಜನಿಕರಿಂದ ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಕೆಯಾಗಿದ್ದು, ಅಲ್ಲಿಂದ ಕ್ರಮಕ್ಕೆ ಸೂಚನೆ ಬಂದಿದೆ ಎಂದು ತಿಳಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.