‘ಶ್ರೀ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿ ವತಿಯಿಂದ ದೇವಸ್ಥಾನದಲ್ಲಿ ಸಕಲ ಸಿದ್ದತೆ
ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಮಾರಿಜಾತ್ರೆಯಲ್ಲಿ ಒಂದಾದ ಭಟ್ಕಳದ ಮಾರಿ ಜಾತ್ರೆಯೂ ಈ ವರ್ಷ ಅದ್ದೂರಿಯಾಗಿ ನಡೆಯಲಿದ್ದು, ಜುಲೈ 22, 23 ಮತ್ತು 24 ರಂದು ಸಂಪ್ರದಾಯಬದ್ದವಾಗಿ ಜರುಗಲಿದೆ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.
ಅವರುಮಾರಿ ಜಾತ್ರಾ ಉತ್ಸವದ ಕುರಿತು ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
“ಜಿಲ್ಲೆಯ ಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವದಲ್ಲಿ ಒಂದಾದ ಭಟ್ಕಳದ ಶ್ರೀ ಮಾರಿಕಾಂಬಾ ದೇವಸ್ಥಾನದ ಮಾರಿ ಜಾತ್ರಾ ಮಹೋತ್ಸವವಾಗಿದೆ.
“ಅನಾದಿಕಾಲದಿಂದಲೂ ಭಟ್ಕಳದ ಮಾರಿ ಜಾತ್ರೆಯು ಪ್ರಸಿದ್ದತೆಯನ್ನು ಪಡೆದುಕೊಂಡಿದ್ದು, ಬರುವಂತಹ ಭಕ್ತರ ಸಂಖ್ಯೆಯು ಹೆಚ್ಚಾಗುತ್ತಿವೆ. ಅದರಂತೆ ಪ್ರತಿ ವರ್ಷ ಆಷಾಢ ಅಮವಾಸ್ಯೆಯ ಮೊದಲ ಬುಧವಾರ ಮತ್ತು ಗುರುವಾರ ಮಾರಿ ಜಾತ್ರೆ ನಡೆಯುವುದು ಮೊದಲಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ. ಈ ವರ್ಷ ಜುಲೈ 22, 23 ಮತ್ತು 24 ರಂದು ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
‘ಜುಲೈ 23 ಮತ್ತು 24 ರಂದು ಮಾರಿ ಜಾತ್ರೆಯು ನಿಗದಿಯಾಗಿದ್ದು, ಮಂಗಳವಾರದಂದು ಮಾರಿ ಮೂರ್ತಿ ಕೆತ್ತನೆ ಕಾರ್ಯವೂ ಮರದ ಮೂಹೂರ್ತದ ದಿನದಿಂದ ಮರ ಇದ್ದ ಸ್ಥಳದಿಂದಲೇ ಕೆತ್ತನೆ ಕಾರ್ಯದಲ್ಲಿ ಮೂರ್ತಿ ತಯಾರಕರು ಸಿದ್ದಗೊಳ್ಳಲಿದ್ದಾರೆ. ಇನ್ನು ಮಾರಿಕಾಂಬಾ ದೇವಸ್ಥಾನದಲ್ಲಿಯೂ ಸಹ ಎರಡು ದಿನ ನಡೆಯುವ ಅದ್ದೂರಿ ಮಾರಿ ಪೂಜೆಯ ತಯಾರಿಕೆ ಅವಶ್ಯಕ ಕೈಂಕರ್ಯಗಳು ನಡೆಯಲಿದೆ.
ಆಷಾಢ ಮಾಸದ ಹುಣ್ಣಿಮೆ ನಂತರ ಬರುವ ಮಂಗಳವಾರದಂದು ಮರದ ಮೂಹೂರ್ತ ನೆರವೇರಿಸಿದ ನಂತರ ಶ್ರೀ ದೇವಿಯ ಬಿಂಬವು ಮೂಡುವ ರೀತಿಯಲ್ಲಿ ಪ್ರಾಥಮಿಕವಾಗಿ ಒಯ್ಯಲು ಅನೂಕೂಲವಾಗುವ ರೀತಿಯಲ್ಲಿ ಮೂರ್ತಿಯನ್ನು ಸಿದ್ದಪಡಿಸಿಕೊಳ್ಳಲಿದ್ದೇವೆ. ಪೂರ್ಣ ಪ್ರಮಾಣದ ಮೂರ್ತಿಯಾಗಿ ನಿರ್ಮಿಸಲು ಶುಕ್ರವಾರದಂದು ಮಣ್ಕುಳಿಯ ಆಚಾರ್ಯರ ಮನೆಯ ಗದ್ದುಗೆಗೆ ಒಯ್ಯಲಾಗುವುದು. ನಂತರ ಆಚಾರ್ಯರ ಮನೆಯಲ್ಲಿ 4 ದಿನಗಳಲ್ಲಿ ಸಕಲ ಶುದ್ದತೆಯಲ್ಲಿ ಸಂಪೂರ್ಣವಾದ ಮೂರ್ತಿ ಕೆತ್ತನೆ ಮಾಡಿ ಮಂಗಳವಾರದಂದು ಜುಲೈ 22 ರಾತ್ರಿ ದೇವಿಗೆ ವಿಶೇಷವಾಗಿ ಸಿಂಗರಿಸಿ ಸುಹಾಸಿನಿ ಪೂಜೆಯನ್ನು ಮಾಡಲಿರುವುದು ಆಚಾರ್ಯ ಮನೆತನದವರು ತಲತಲಾಂತರದಿಂದ ನಡೆಸಿಕೊಂಡು ಬಂದಂತಹ ಪದ್ಧತಿಯಾಗಿದೆ.
ಮಾರನೇ ದಿನ ಜುಲೈ 23 ಬುಧವಾರದಂದು ಬೆಳಗಿನ ಜಾವದ ಪೂಜೆಯನ್ನು ಸಲ್ಲಿಸಿ ನಂತರ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗೆ ದೇವಿಯ ಮೂರ್ತಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ. ಅಂದು ಪರ ಊರಿನ ಭಕ್ತರು ಬಂದು ದೇವಿಗೆ ಪೂಜೆ ಹಣ್ಣು ಕಾಯಿ ಸೇವೆ ಸಲ್ಲಿಸಲಿದ್ದಾರೆ.
ಜುಲೈ 24 ರಂದು ಗುರುವಾರದಂದು ಊರಿನ ಭಕ್ತರು ಬಂದು ಪೂಜಾ ಕೈಂಕರ್ಯ ಸೇವೆಯನ್ನು ಸಲ್ಲಿಸಲಿದ್ದು ಅಂದು ಮಧ್ಯಾಹ್ನದ ವೇಳೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೇರಿಸಿ ಭಕ್ತರು ತಲೆ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡಲಿದ್ದಾರೆ ಎಂದರು.
ಈ ಎಲ್ಲಾ ನಿಗದಿತ ದಿನದ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆಗಳಾಗುತ್ತಿವೆ. ಈಗಾಗಲೇ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ದೇವಿಯ ದರ್ಶನ, ಪೂಜಾ ಕೈಂಕರ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ. ನಾಯ್ಕ ಮಾತನಾಡಿ ‘ಮಾರಿ ಜಾತ್ರೆಯ ಉದ್ದೇಶವೇ ಊರಿನಲ್ಲಿನ ರೋಗ ರುಜಿನಿಗಳ ನಿವಾರಣೆಯಾಗಿದ್ದು, ಜಾತ್ರೆ ಮಹೋತ್ಸವ, ಮಾರಿ ದೇವಿ ಪ್ರತಿಷ್ಠಾಪನೆ, ಪೂಜೆ ಹಾಗೂ ಸಕಲ ಸಂಪ್ರದಾಯಿಕ ವಿಧಿ ವಿಧಾನದಂತೆ ವಿಸರ್ಜನೆಯೂ ಆಡಳಿತ ಕಮಿಟಿಯಿಂದಲೇ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಮಿಟಿ ಸದಸ್ಯರಾದ ಮಹಾದೇವ ಮೋಗೇರ, ನರೇಂದ್ರ ನಾಯಕ, ಸುರೇಂದ್ರ ಭಟ್ಕಳಕರ, ಶ್ರೀಪಾದ ಕಂಚುಗಾರ, ಸುರೇಶ ಆಚಾರ್ಯ, ವಾಮನ ಶಿರಸಾಟ, ಕ್ರಷ್ಣ ಮಹಾಲೆ ಸೇರಿದಂತೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.