ಬಿಜೆಪಿಗರದ್ದು ಸುಳ್ಳು ಭರವಸೆ, ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ: ಡಾ.ಅಂಜಲಿ

Share

ಬಿಜೆಪಿಗರದ್ದು ಸುಳ್ಳು ಭರವಸೆ, ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ: ಡಾ.ಅಂಜಲಿ

ಜೊಯಿಡಾ: ೨೦೧೪ರಿಂದ ಬಿಜೆಪಿಗರು ಹೇಳುತ್ತಿದ್ದಾರೆ, ಖಾತೆಗೆ ೧೫ ಲಕ್ಷ ಹಾಕುತ್ತೇವೆಂದು. ಅದಕ್ಕಾಗಿ ಝೀರೋ ಖಾತೆ ಮಾಡಿಸಿದರು. ಎಲ್ಲಾದರೂ ಓರ್ವ ಬಿಜೆಪಿಗನ ಖಾತೆಗೆ ಹಣ ಬಂದಿದ್ದರೆ ಹೇಳಿ, ನಾವೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸವಾಲೆಸೆದರು.

ಜೊಯಿಡಾದ ಗಣೇಶಗುಡಿಯಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಜೆಪಿಗರಂತೆ ಸುಳ್ಳು ಹೇಳಲ್ಲ; ಯಾವ ಪಕ್ಷ, ಜಾತಿ ಭೇದ ನೋಡದೆ ಐದೂ ಗ್ಯಾರಂಟಿಯನ್ನ ಮುಟ್ಟಿಸಿದ್ದೇವೆ. ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು‌.

ಸಿಲಿಂಡರ್ ೪೦೦ ರೂ. ಇದ್ದಾಗ ಬಿಜೆಪಿಯ ಸ್ಮೃತಿ ಇರಾನಿ ಸಿಲಿಂಡರ್ ಹಿಡಿದು ರಸ್ತೆಗೆ ಇಳಿಯುತ್ತಿದ್ದರು. ಈಗ ಸಾವಿರ ದಾಟಿದೆ, ಆದರೆ ಅವರೆಲ್ಲ ಮೌನವಾಗಿದ್ದಾರೆ. ಹೀಗಾಗಿ ನಾವು ಮಾತನಾಡಬೇಕಿದೆ, ಅದಕ್ಕಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ.ದೇಶಪಾಂಡೆ ಮಾತನಾಡಿ, ಜೊಯಿಡಾದಲ್ಲಿ ಕುಣಬಿ ಸಮಾಜದವರ ಸಂಖ್ಯೆ ಹೆಚ್ಚಿದೆ. ಗೋವಾ ಕುಣಬಿಗಳು ಪರಶಿಷ್ಟ ಪಂಗಡದಲ್ಲಿದ್ದಾರೆ. ಜೊಯಿಡಾದ ಕುಣಬಿಗಳೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಎಲ್ಲಾ ಕ್ಷೇತ್ರದಿಂದಲೂ ಹಿಂದುಳಿದಿದ್ದಾರೆ. ಹೀಗಾಗಿ ಇಲ್ಲಿಯ ಕುಣಬಿಗಳನ್ನೂ ಪ.ಪಂಗಡಕ್ಕೆ ಸೇರಿಸಬೇಕಂಬ ಪ್ರಯತ್ನಗಳು ನಡೆದಿವೆ. ಆದರೆ ಈ ಪ್ರಕ್ರಿಯೆ ಅಂತಿಮ ಹಂತದಲ್ಲಿ ಭಾರತ ಸರ್ಕಾರದಲ್ಲಿದೆ. ಕಾಂಗ್ರೆಸ್ ಬಡವರ, ಕೂಲಿಕಾರರ ಪಕ್ಷ. ಕುಣಬಿಗಳ ಅಭ್ಯುದಯಕ್ಕಾಗಿ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿಗರು ೩೦ ವರ್ಷಗಳಿಂದ ಸುಳ್ಳು ಹೇಳುತ್ತಾ, ಭ್ರಷ್ಟಾಚಾರ ಮಾಡುತ್ತಾ ಅಧಿಕಾರ ಮಾಡಿದರು. ಅವರ ಸುಳ್ಳು ಈಗ ಜನರಿಗೆ ಗೊತ್ತಾಗಿದೆ. ಸುಳ್ಳು ಬಿಟ್ಟರೆ ಅವರು ಬೇರೇನೂ ಮಾಡಿಲ್ಲ. ಬಿಜೆಪಿ ಪಕ್ಷದಿಂದ ಸಾಮಾನ್ಯಜನರಿಗೆ ಒಂದೇ ಒಂದು ಪ್ರಯೋಜನಕಾರಿ ಕೆಲಸ ಆಗಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದೆ; ಗ್ಯಾರಂಟಿಯನ್ನ ಜನರಿಗೆ ತಲುಪಿಸಿದೆ. ಬಿಜೆಪಿಗರು ಚುನಾವಣೆಗಾಗಿ ಮತ್ತೆ ಸುಳ್ಳು ಹೇಳಿಕೊಂಡು ಬರುತ್ತಾರೆ. ಜನ ಅವರನ್ನ ನಂಬಬಾರದು‌. ನಾವೆಲ್ಲರೂ ಸೇರಿ ಈ ಬಾರಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಸಂಸತ್ ಗೆ ಕಳುಹಿಸೋಣ. ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಸಂಸತ್ ನಲ್ಲಿ ಅಗತ್ಯ ತಿದ್ದುಪಡಿಗೆ ಅವರು ಶ್ರಮಿಸಲಿದ್ದಾರೆ. ಅರಣ್ಯ ಅತಿಕ್ರಮಣ ಸಕ್ರಮಾತಿ ಕೂಡ ನಮ್ಮ ಮತ್ತೊಂದು ಗ್ಯಾರಂಟಿ ಎಂದು ಘೋಷಿಸಿದರು‌.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೋರಾಟದ ಸಮುದಾಯದಿಂದ ಬಂದವರು. ಕಾಂಗ್ರೆಸ್ ನ ಅಭ್ಯರ್ಥಿಯ ಗೆಲುವಿಗಾಗಿ ತಾವೆಲ್ಲರೂ ಶ್ರಮಿಸಬೇಕು ಎಂದು ಕರೆನೀಡಿದರು.

ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಅರಿಶಿನ- ಕುಂಕುಮ ನೀಡಿ, ಬಳೆ ತೊಡಿಸಿ ಉಡಿ ತುಂಬಲಾಯಿತು. ಬ್ಲಾಕ್ ಕಾಂಗ್ರೆಸ್ ನಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವ ಅವೇಡಾ ಬಸ್ ತಂಗುದಾಣದ ಬಳಿಯ ಶಿವಾಜಿ ಮೂರ್ತಿಗೆ ಗಣ್ಯರೆಲ್ಲರೂ ಮಾಲಾರ್ಪಣೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಕಿಸಾನ್ ಮೋರ್ಚಾ ಅಧ್ಯಕ್ಷ ರವಿ ರೇಡ್ಕರ್, ರಮೇಶ್ ನಾಯ್ಕ, ಸಂಜಯ್ ಹಣಬರ, ಸದಾನಂದ ದುಬಾಶಿ ಮುಂತಾ ಮುಂತಾದವರಿದ್ದರು.

.
೧೮೮೫ರಲ್ಲಿ ಕಾಂಗ್ರೆಸ್ ಹುಟ್ಟಿದೆ. ಬಿಜೆಪಿಯದ್ದು ಏನು ಇತಿಹಾಸವಿದೆ? ಬಿಜೆಪಿ ಹುಟ್ಟಿದ್ದು ಮೊನ್ನೆ ಮೊನ್ನೆ. ಅದಕ್ಕೆ ನನ್ನ ಮಗನ ವಯಸ್ಸಾಗಿದೆಯಷ್ಟೇ. ತ್ಯಾಗ- ಬಲಿದಾನ ಮಾಡಿದ, ಜೈಲಿಗೆ ಹೋಗಿರುವ ನಾಯಕರು ನಮ್ಮವರು. ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್.

  • ಆರ್.ವಿ.ದೇಶಪಾಂಡೆ, ಶಾಸಕ

Leave a Reply

Your email address will not be published. Required fields are marked *

error: Content is protected !!