ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ !
ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಮಸೂದೆಗೆ ತಿದ್ದುಪಡಿ ತಂದಿದ್ದು, ಹೊಸ ತಿದ್ದುಪಡಿ ಮಸೂದೆಯ ಪ್ರಕಾರ ಬಿ ಗ್ರೇಡ್ ದೇವಸ್ಥಾನಗಳು 5% ಆದಾಯ ಮತ್ತು 1 ಕೋಟಿಗಿಂತ ಹೆಚ್ಚು ಆದಾಯ ತರುವ ಎ ಗ್ರೇಡ್ ದೇವಸ್ಥಾನಗಳು 10% ಶೇ. ತೆರಿಗೆಯನ್ನು ಸರಕಾರದ ಕಾಮನ್ ಪೂಲ್ ಫಂಡ್ ಗೆ ನೀಡುವ ಬಗ್ಗೆ ತಿದ್ದುಪಡಿಯನ್ನು ತರಲಾಗಿತ್ತು. ಅಷ್ಟೇ ಅಲ್ಲದೇ ಎ ಗ್ರೇಡ್ ದೇವಾಲಯಗಳ ಮೂಲಭೂತ ಸೌಕರ್ಯದ ನೆಪದಲ್ಲಿ 9 ಜನರ ಜಿಲ್ಲಾ ಮಟ್ಟದ ಉನ್ನತ ಸಮಿತಿ ಮತ್ತು ರಾಜ್ಯ ಮಟ್ಟದ 14 ಜನರ ಸಮಿತಿ ರಚನೆ ಮಾಡಿತ್ತು.
ಈ ಕಾಯ್ದೆಯನ್ನು ಕರ್ನಾಟಕ ದೇವಸ್ಥಾನ ಮಹಾಸಂಘವು ತೀವ್ರವಾಗಿ ಖಂಡಿಸಿತ್ತು ಮತ್ತು ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ರಾಜ್ಯದ 15 ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಅನೇಕ ಕಡೆಗಳಲ್ಲಿ ಆಂದೋಲನವನ್ನೂ ನಡೆಸಲಾಗಿತ್ತು. ಈ ಬೇಡಿಕೆಗೆ ಬುಧವಾರ 20 ಮಾರ್ಚ್ ರಂದು ಪ್ರತಿಕ್ರಿಯಿಸಿದ ಮಾನ್ಯ ರಾಜ್ಯಪಾಲರು ಈ ಪ್ರಸ್ತಾಪಿತ ಮಸೂದೆಯಲ್ಲಿ ಅನೇಕ ಅಂಶಗಳು ತಾರತಮ್ಯತೆಯಿಂದ ಕೂಡಿದೆ ಎಂದು ಹೇಳಿ ಅದನ್ನು ಸರಕಾರಕ್ಕೆ ವಾಪಾಸ್ ಕಳಿಸಿದ್ದಾರೆ. ಮಾನ್ಯ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರ ಈ ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಸ್ವಾಗತಿಸುತ್ತದೆ ಮತ್ತು ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೇ ರೀತಿ ಸನ್ನದ್ಧವಾಗಿರುವುದು ಎಂದು ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.