ಯಕ್ಷಗಾನ ನಡೆಸಲು ಕೇವಲ ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಕಲಾಪೋಷಕರು ಅಗತ್ಯ:ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

Share

ಮುರುಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ ಗೋಳಿಕುಂಬ್ರಿ ಇವರ ಪೌರಾಣಿಕ ಯಕ್ಷೋತ್ಸವ ಸಪ್ತಾಹದ ದಶಮಾನೋತ್ಸವ ಸಂಭ್ರಮ ಯಕ್ಷದಶಾಹಕ್ಕೆ ಶುಕ್ರವಾರ ಸಂಜೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಚಾಲನೆ ನೀಡಿದರು.

ನಂತರ ಆಶೀರ್ವಚನ ನೀಡಿದ ಶ್ರೀಗಳು ಯಕ್ಷಗಾನದಲ್ಲಿ ಪರಕಾಯ ಪ್ರವೇಶ ವಿಶೇಷವಾಗಿದೆ. ಯಕ್ಷಗಾನ ಕಲಾವಿದ ಒಂದಷ್ಟು ಸಮಯ ಅಸಾಮಾನ್ಯ ವ್ಯಕ್ತಿತ್ವದ ಪರಕಾಯ ಪ್ರವೇಶ ಮಾಡಿ ಪ್ರದರ್ಶನ ನೀಡಿ ಗಮನ ಸೆಳೆಯುತ್ತಾರೆ. ಯಕ್ಷಗಾನ ಪ್ರಸಂಗ ಪ್ರೇಕ್ಷಕರನ್ನು ಸಂಪೂರ್ಣ ತಲ್ಲಿನರನ್ನಾಗಿಸುತ್ತದೆ. ಯಕ್ಷಗಾನದಿಂದ ಜೀವನಕ್ಕೆ ಬೇಕಾಗಿದ್ದನ್ನು ಸಾಕಷ್ಟು ಕಲಿಯಬಹುದಾಗಿದೆ. ಶಿಕ್ಷಣ ಮತ್ತು ಜ್ಞಾನ ಮಾಧ್ಯಮ ಯಕ್ಷಗಾನವಾಗಿದೆ. ಯಕ್ಷಗಾನ ಸಪ್ತಾಹ ನಡೆಸುವುದು ಸುಲಭವಲ್ಲ. ಇದೊಂದು ಸಾಧನೆಯೇ ಆಗಿದೆ. ಯಕ್ಷಗಾನ ನಡೆಸಲು ಕೇವಲ ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಕಲಾಪೋಷಕರು ಅಗತ್ಯ. ಅಂಥವರಿoದ ಮಾತ್ರ ಇಂತಹ ಕಾರ್ಯ ಸಾಧ್ಯ. ಗೆಜ್ಜೆ ಮತ್ತು ಕಿರೀಟ ಕೊಟ್ಟು ಗೌರವಿಸಿದ್ದನ್ನು ಸ್ಮರಿಸಿದ ಶ್ರೀಗಳು ಯಕ್ಷಗಾನವನ್ನು ಕಾಲಿನಿಂದ ತಲೆಯ ತನಕ ಗೌರವಿಸಿದಂತಾಗಿದೆ . ಕಲೆ ಮತ್ತು ಜೀವನ ಎರಡೂ ಗೆಲ್ಲಬೇಕು. ಯಕ್ಷಗಾನ ಸಪ್ತಾಹದ ದಶಮಾನೋತ್ಸವ ಸಂಭ್ರಮದಿoದ ಆಚರಿಸಿದಂತೆ ಬೆಳ್ಳಿ ಮಹೋತ್ಸವವನ್ನೂ ಸಂಭ್ರಮದಿ0ದ ಆಚರಿಸುವಂತಾಗಲಿ ಎಂದು ಹಾರೈಸಿದರು. ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನಾಗರಾಜ ಮಧ್ಯಸ್ಥ ಅವರು ಉತ್ತಮವವಾಗಿ ಯಕ್ಷಗಾನ ಸಪ್ತಾಹವನ್ನು ನಡೆಸಿಕೊಂಡು ಬಂದಿದ್ದಾರೆ. ಯಕ್ಷಗಾನ ಕಲೆ ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವೆಂದರು. ಯಕ್ಷಗಾನ ಸಪ್ತಾಹದ ರೂವಾರಿ ನಾಗರಾಜ ಮಧ್ಯಸ್ಥ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ,ಕೃಷ್ಣಾನಂದ ಭಟ್ಟ ಬಲ್ಸೆ, ಉದ್ಯಮಿಗಳಾದ ನಿರಂಜನ ಜೈನ್, ವೆಂಕಟ್ರಮಣ ಹೆಗಡೆ ಕವಲಕ್ಕಿ, ನಾಗರಾಜ ಭಟ್ಟ, ಪತ್ರಕರ್ತ ರಾಧಾಕೃಷ್ಣ ಭಟ್ಟ, ತೋಟಿ ಗಣಪತಿ ಹೆಗಡೆ ಮುಂತಾದವರಿದ್ದರು. ದಿ. ರಾಮ ಹೆಗಡೆ ಮತ್ತು ದಿ. ಲಕ್ಷ್ಮಣ ಹೆಗಡೆ ಕೊಂಡದಕುಳಿ ಪ್ರಶಸ್ತಿಯನ್ನು ನಾಗರಾಜ ಮಧ್ಯಸ್ಥ ಅವರಿಗೆ ನೀಡಿ ಗೌರವಿಸಲಾಯಿತು. ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ರಜತ ಕಿರಿಟ ಮತ್ತು ತೋಟಿ ಗಣಪತಿ ಹೆಗಡೆ ಅವರಿಗೆ ರಜತ ಗೆಜ್ಜೆ ನೀಡಿ ಗೌರವಿಸಲಾಯಿತು. ಮುರುಡೇಶ್ವರದಲ್ಲಿ ಧೇನು ಗೋಶಾಲೆ ನಿರ್ಮಿಸಿಕೊಂಡು ಗೋಸೇವೆ ಮಾಡುತ್ತಿರುವ ಯೋಗೇಶ ಭಟ್ಟ ಮತ್ತು ರೇಷ್ಮಾ ದಂಪತಿಯನ್ನು ಶ್ರೀಗಳು ಗೌರವಿಸಿ ಸನ್ಮಾನಿಸಿದರು.ಯಕ್ಷಗಾನ ಸಪ್ತಾಹದ ಗೌರವಾಧ್ಯಕ್ಷ ನಾಗರಾಜ ಭಟ್ಟ ಬೇಂಗ್ರೆ ಸ್ವಾಗತಿಸಿದರು. ಡಾ. ವಿ ಕೆ ಶ್ರೀಪಾದ ಭಟ್ಟ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕ ಐ ವಿ ಹೆಗಡೆ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಸಮರ ಸೌಗಂಧಿಕಾ ಪೌರಾಣಿಕ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನರಂಜಿಸಿತು. ಫೆ. ೧೧ರ ವರೆಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!