ಕಾರವಾರ: ನೀರು ಶುದ್ಧೀಕರಣ ಘಟಕಗಳ ಮೂಲಕ ಶುದ್ದ ನೀರು ಪೂರೈಕೆ

Share

 ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸುವುದು ಎಲ್ಲಾ ಆಡಳಿತ ವ್ಯವಸ್ಥೆಗಳ ಮೂಲಭೂತ ಕರ್ತವ್ಯವಾಗಿದ್ದು, ನಗರೀಕರಣ ಹಾಗೂ ಬೆಳಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರು ಒದಗಿಸುವುದು ಸವಾಲಿನ ಕೆಲಸವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸವಾಲು ಎದುರಿಸಲು 241 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಜಿಲ್ಲೆಯಲ್ಲಿ 241 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಸಹ  ಸಂಬಂಧಿಸಿದ ಸಂಸ್ಥೆಗಳು ಅವುಗಳನ್ನು ಕಾಲ ಕಾಲಕ್ಕೆ ಸೂಕ್ತ ನಿರ್ವಹಣೆ ಮಾಡದ ಕಾರಣ ಅನೇಕ ಘಟಕಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ಈ ಘಟಕಗಳ ಸ್ಥಾಪನೆಯ ಮೂಲ ಉದ್ದೇಶವೇ ವಿಫಲಗೊಳ್ಳುವ ಸಾಧ್ಯತೆಯಿದ್ದುದರಿಂದ ಜಿಲ್ಲಾ ಪಂಚಾಯತ್ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿಷ್ಕ್ರಿಯಗೊಂಡಿದ್ದ ಘಟಕಗಳನ್ನು ದುರಸ್ಥಿಪಡಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. 

ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಜವಾಬ್ದಾರಿಯಲ್ಲಿ ಅಸಮರ್ಥವಾಗಿದ್ದ ಸಂಸ್ಥೆಗಳ ಟೆಂಡರ್ ರದ್ದುಪಡಿಸಿ, ಘಟಕಗಳ ನಿರ್ವಹಣೆಗೆ ಮರುಟೆಂಡರ್ ಕರೆಯುವ ಮೂಲಕ, ಸಮರ್ಪಕವಾಗಿ ನಿರ್ವಹಣೆ ಮಾಡಲು ಆರ್ಹವಾಗಿದ್ದ ಸಂಸ್ಥೆಗಳಿಗೆ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ನಿಷ್ಕ್ರಿಯಗೊಂಡಿದ್ದ ಘಟಕಗಳನ್ನು ದುರಸ್ಥಿಪಡಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.  ಸ್ಥಳೀಯರು ಬಳಕೆ ಮಾಡದ ಕೆಲವು ಅನುಪಯುಕ್ತ ಘಟಕಗಳನ್ನು ಅವಶ್ಯಕತೆಯಿರುವ ಕಡೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಇರುವ ಒಟ್ಟು 241 ಘಟಕಗಳಲ್ಲಿ 203 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ 38 ಘಟಕಗಳನ್ನು ಶೀಘ್ರದಲ್ಲಿ ದುರಸ್ಥಿಪಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಈ ನೀರು ಶುಧ್ದೀಕರಣ ಘಟಕಗಳು ರಿವರ್ಸ್ ಓಸ್ಮೋಸಿಸ್ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ಅಂದರೆ ಪ್ರತೀ 5 ರೂಪಾಯಿಗೆ 20 ಲೀ ಪರಿಶುದ್ದ ನೀರನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಸಂಗ್ರಹಗೊಂಡ ಮೊತ್ತದಲ್ಲಿ ಘಟಕದ ನಿರ್ವಹಣೆ, ದುರಸ್ತಿ, ವಿದ್ಯುತ್ ಬಿಲ್ ಇತ್ಯಾದಿ ವೆಚ್ಚಗಳನ್ನು ನಿಭಾಯಿಸಲಾಗುತ್ತಿದೆ. ಈ ಘಟಕಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರು ನೀರಿಗಾಗಿ ಕಾಯುವ ಬವಣೆ ತಪ್ಪಿದಂತಾಗಿ ತಮಗೆ ಅನುಕೂಲವಾದ ಸಮಯದಲ್ಲಿ ನೀರನ್ನು ಪಡೆಯಬಹುದಾಗಿದೆ.

ನೀರು ಶುಧ್ದೀಕರಣ ಘಟಕಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳಿಗೆ ಎಫ್.ಟಿ.ಕೆ. ಕಿಟ್ ಗಳನ್ನು ನೀಡುವುದರ ಜೊತೆಗೆ ಗುಣಮಟ್ಟ ಪರೀಕ್ಷಿಸುವ ಕುರಿತಂತೆ ತರಬೇತಿಯನ್ನೂ ಕೂಡಾ ನೀಡಲಾಗಿದೆ. ಅಲ್ಲದೇ ಕಾಲ ಕಾಲಕ್ಕೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಪ್ರಯೋಗಾಲಯಗಳಲ್ಲಿ ನೀರಿನ ಸ್ಯಾಂಪಲ್‍ಗಳನ್ನು ಪರೀಕ್ಷಿಸುವುದರ ಜೊತೆಗೆ, ಘಟಕದಲ್ಲಿರುವ ನೀರಿನ ತೊಟ್ಟಿ ಹಾಗೂ ಫಿಲ್ಟರ್‍ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 139, ಕೆ.ಆರ್.ಐ.ಡಿ.ಎಲ್ ವತಿಯಿಂದ 47, ಸಹಕಾರ ಸಂಘಗಳ ಮೂಲಕ 25 ಹಾಗೂ ಇತರೆ ಇಲಾಖೆಯಿಂದ 30 ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಒಟ್ಟು 241 ಘಕಟಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೆ.ಆರ್.ಐ.ಡಿ.ಎಲ್ ಹಾಗೂ ಇತರೆ ಇಲಾಖೆಯಿಂದ ಅಳವಡಿಸಿರುವ ನೀರಿನ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಇವುಗಳ ವಾರ್ಷಿಕ ನಿರ್ವಹಣೆಗೆ ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಲಾಗಿದೆ.  ಈ ಎಲ್ಲಾ ನೀರಿನ ಘಟಕಗಳು ಸುವ್ಯವಸ್ಥಿತ ರೀತಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಬಗ್ಗೆ ಹಾಗೂ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರಿಶೀಲನೆ ನೆಡೆಸಿ, ಸಾರ್ವಜನಿಕರಿಗೆ ಪರಿಶುದ್ದ ಕುಡಿಯುವ ನೀರು ಒದಗಿಸಲು ಅಗತ್ಯವಿರುವ ಎಲ್ಲಾಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಮತ್ತು ನಿರ್ದೇಶನಗಳನ್ನು ನೀಡಲಾಗಿದೆ : ಈಶ್ವರಕುಮಾರ್ ಕಾಂದೂ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಉತ್ತರಕನ್ನಡಜಿಲ್ಲೆ

Leave a Reply

Your email address will not be published. Required fields are marked *

error: Content is protected !!