
ಭಟ್ಕಳ: ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ ( 20 ಅಂಶ ಸೇರಿ) ಪ್ರಗತಿ ಪರಿಶೀಲನಾ ಸಭೆಯು ಮಂಗಳವಾರದಂದು ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ‘ವಿವಿಧ ಇಲಾಖೆಗೆ ಬರುವ ಅನುದಾನದ ಹಣ ವಾಪಸ್ಸಾತಿ ಆದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದ ಅವರು ಜಾಗತಿಕ ಮಟ್ಟದಲ್ಲಿ ಕಾರವಾರ ಅಂಕೋಲಾದಲ್ಲಿ ಅತೀ ಹೆಚ್ಚು ಅಂದರೆ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನದಲ್ಲಿ ಉಷ್ಣಾಂಶ ತಾಪ ಕಷ್ಟವಾಗಲಿದ್ದು ಇದಕ್ಕೆ ಅಧಿಕಾರಿಗಳು ಸಿದ್ದರಿರಬೇಕು. ಇದರಿಂದ ನಮ್ಮಲ್ಲಿ ನೀರಿನ ಅಭಾವ ಉಂಟಾಗಲಿದೆ. ಇದರ ಮುಂಜಾಗ್ರತೆಯಲ್ಲಿ ಅಧಿಕಾರಿಗಳು ಇರಬೇಕು ಎಂದರು.
ಪಂಚಾಯತಗಳಲ್ಲಿ ಯಾವುದೇ ಜನಪ್ರತಿನಿಧಿಗಳಿಲ್ಲ. ಹಾಗಾಗಿ ಜನಸಾಮಾನ್ಯರೇ ಸಮಸ್ಯೆಯನ್ನು ತಿಳಿಸಬೇಕಾಗುತ್ತದೆ. ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿ ಎಂದು ಹೇಳಿದರು.
ಜನರ ಟ್ಯಾಕ್ಸನಿಂದ ನಾವೆಲ್ಲ ಬದುಕುತ್ತಿದ್ದೇವೆ ಅದು ಜನ ಸಾಮಾನ್ಯರ ಹಣ ಎಂಬುದು ನನ್ನ ಸಹಿತ ಅರಿವಿರಬೇಕು. ಮುಂದಿನ ತಿಂಗಳಲ್ಲಿಅಂದಾಜು 4 ಲಕ್ಷ ಕೋಟಿ ರೂ. ವೆಚ್ಚ ಬಜೆಟ್ ಮಂಡಿಸಲಿದ್ದೇವೆ. ಅವೆಲ್ಲವು ಜನರ ತೆರಿಗೆ ಹಣವಾಗಿದೆ ಎಂದ ಅವರು ನಂತರ ಸಭೆಯಲ್ಲಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಚಿವರು ಕೈಗೊಂಡರು.
ತಾಲುಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರುಣ ಕುಮಾರ ರೋಗಿಗಳ ಪಾಲಿಗೆ ಸಾಕ್ಷಾತ್ ದೇವರಂತೆ ಆಗಿಹೋಗಿದ್ದಾರೆ. ಇದಕ್ಕೆ ಸಚಿವರು ಅಭಿನಂದಿಸಿದರು. ರೋಗಿಗಳು ಹೊರಗಡೆಯಿಂದ ಔಷಧಿಗಳನ್ನು ಕೊಂಡುಕೊಳ್ಳುವಂತಾಗಬಾರದು. 2013 ರಲ್ಲಿ ಆರೋಗ್ಯ ರಕ್ಷಾ ಸಮಿತಿಯಿಂದ ಮೆಡಿಸಿನ್ ಖರೀದಿ ಮಾಡಿ ಎಂದು ತಿಳಿಸಿದ್ದೆ. ಈಗ ಒಂದು ಸಭೆಯನ್ನು ಮಾಡಿ ಅದಕ್ಕೆ ಯಾವ ವ್ಯವಸ್ಥೆ ಮಾಡಬೇಕೆಂದು ತಿಳಿಸಿ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಅರುಣ ಕುಮಾರ ಮಾತನಾಡಿ 6 ಲಕ್ಷ ಬಜೆಟ್ ನಲ್ಲಿ ದಿನಂಪ್ರತಿ 10 ಸಾವಿರ ಔಷಧಿ ವಿತರಣೆ ಮಾಡಲಾಗುತ್ತದೆ.ಗ್ರೂಪ್ ಡಿ ಸಂಬಳ 3 ತಿಂಗಳಿನಿಂದ ಆಗಿಲ್ಲ ಎಂದು ಇದಕ್ಕೆ ತಕ್ಷಣಕ್ಕೆ ಕಾರವಾರ ಡಿ.ಎಚ್.ಓ. ಅವರಿಗೆ ಕರೆ ಮಾಡಿ ಸಮಸ್ಯೆ ತಕ್ಷಣಕ್ಕೆ ಪರಿಹರಿಸಿ ಸಂಬಳ ಆಗುವಂತೆ ಮಾಡಿ ಎಂದು ಸೂಚನೆ ನೀಡಿದರು.
ಪಶುಸಂಗೋಪನೆ ಇಲಾಖೆಯಿಂದ ವೈದ್ಯಾದಿಕಾರಿ ಶಿವಕುಮಾರ ಮಾತನಾಡಿ 95 ಪ್ರತಿ ಶತ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗಿದೆ. ಇದಕ್ಕೆ ಸಚಿವರು 100 ಪ್ರತಿಶತ ಸಾಧನೆ ಮಾಡುವಂತೆ ಹೇಳಿದರುಒಟ್ಟು 20 ಸಾವಿರ ಜಾನುವಾರು, 12 ಸಾವಿರ ಆಕಳು ಇದ್ದು ರೈತರಿಗೆ ಅನೂಕೂಲ ಆಗುವಂತೆ ತಾಲೂಕಿನಲ್ಲಿ ಒಂದು ಹಾಲು ಸೊಸೈಟಿ ಮಾಡಿದರೆ ಅನುಕೂಲ ಈ ಬಗ್ಗೆ ಘಟಕ ಸ್ಥಾಪನೆಗೆ ಕೆ.ಎಮ್.ಎಫ್. ನಿಂದ ಎಲ್ಲಾ ಖರ್ಚು ವೆಚ್ಚ ನೀಡಲಿದೆ ಎಂದ ಸಚಿವರು
ತಾಲೂಕಿನಲ್ಲಿ ಹಾಲು ಉತ್ಪಾದನೆ, ಹಾಲಿನ ಪ್ರಸ್ತುತ ಬೆಲೆ, ಹಾಲಿನ ಬೆಲೆಯ ಕುರಿತು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇರಬೇಕು ಎಂದ ಸಚಿವರು ಹಾಲು ಸಂಸ್ಕರಣೆ ಘಟವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದ ಅವರು ಒಂದು ಘಟಕದ ಸ್ಥಾಪನೆಗೆ ಸಚಿವ ವೈದ್ಯ ಚಿಂತನೆ ಮಾಡುವುದಾಗಿ ತಿಳಿಸಿದರು.
2025-26 ನೇ ಸಾಲಿನಲ್ಲಿ ಸರಕಾರಿ ಪ್ರೌಢಶಾಲೆ (ಕೆ.ಪಿ.ಸಿ.) ಗೊರಟೆ ಮತ್ತು ತೆಂಗಿನಗುಂಡಿಯನ್ನಾಗಿ ಸಚಿವರು ಸರಕಾರದಿಂದ ಮಂಜೂರು ಮಾಡಿದ್ದಾರೆ. ಇನ್ನು ಕುಂಟವಾಣಿ, ಬೆಳಕೆ, ಮುಂಡಳ್ಳಿ ಪ್ರೌಢಶಾಲೆಯನ್ನಾಗಿ ಮಾರ್ಪಾಡು ಮಾಡಬಹುದಾಗಿದೆ ಎಂದು ಬಿ.ಇ.ಓ ವೆಂಕಟೇಶ ನಾಯ್ಕ ತಿಳಿಸಿದರು.
2026-27 ರೊಳಗೆ ಶಾಲೆಗಳ ಹಳೆ ಕಟ್ಟಡ ಇರಬಾರದು. ಎಲ್ಲವು ಹೊಸ ಕಟ್ಟಡ ಆಗಿರಬೇಕು. ಅಕ್ಷರ ದಾಸೋಹದ ಕಟ್ಟಡ, ಅಂಗನವಾಡಿ, ಶೌಚಾಲಯಕ್ಕಾಗಿ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಲಿದ್ದೇನೆ. ಹಳೆ ಕಟ್ಟಡ ಇದ್ದರೆ ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕೆಂಬ ನಿರ್ಧಾರ ಮಾಡಲಾಗಿದೆ.ಈ ಬಾರಿ ಶಿಕ್ಷಕರ ದಿನಾಚರಣೆಯಂದು ಗುರು ಭವನ ನಿರ್ಮಾಣ ಆಗಬೇಕು ಅಲ್ಲಿಯೇ ಕಾರ್ಯಕ್ರಮ ಆಗಬೇಕು ಎಂದು ಸಚಿವ ವೈದ್ಯ ಸೂಚಿಸಿದರು.
ಅಕ್ಷರ ದಾಸೋಹ –
ಇಲಾಖೆಯ ಅಧಿಕಾರಿ ರಾಘವೇಂದ್ರ ಅವರು ಉತ್ತಮ ಕಾರ್ಯವನ್ನು ಶ್ಲಾಘಿಸಿದ ಸಚಿವ ವೈದ್ಯ ಅವರು ಸ್ಥಳೀಯ ನಿವಾಸಿಯಾದ ನಿಮ್ಮ ಕೆಲಸ ಮೆಚ್ಚನಾರ್ಹವಾಗಿದೆ. ಪ್ರತಿ ಶಾಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಮಾತನಾಡಿ ಒಟ್ಟು ಭಟ್ಕಳದಲ್ಲಿ 45070 ಕುಟುಂಬಗಳ ಪೈಕಿ 39400 ಕುಟುಂಗಳಿಗೆ ಗೃಹಜ್ಯೋತಿ ಯೋಜನೆ ಪಡೆದುಕೊಂಡಿದೆ. ತಿಂಗಳಿಗೆ 2 ಕೋಟಿ 18 ಲಕ್ಷ ಗೃಹಜ್ಯೋತಿ ಯೋಜನೆಗೆ ಸರ್ಕಾರ ಅನುದಾನ ಒದಗಿಸುತ್ತಿದೆ ಇದಕ್ಕಿಂತ ದೊಡ್ಡ ಅಭಿವೃದ್ಧಿ ಬೇಕೆ ಎಂದು ಸಚಿವರು ಹೇಳಿದರು.
25 ಕೋಟಿ ವೆಚ್ಚದಲ್ಲಿ 110 ಕೆ.ವಿ. ಘಟಕ ನಿರ್ಮಾಣ ಕಾರ್ಯ 90% ಆಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಅವರು ತಿಳಿಸಿದರು. ಕಾಯ್ಕಿಣಿ ಮತ್ತು ಬೈಲುರನಲ್ಲಿನ ಸಮಸ್ಯೆ ಇದ್ದು ಅದು ಪರಿಹರಿಸಿದ್ದೇವೆ ಎಂದು ಸಚಿವ ವೈದ್ಯ ಸಭೆಯಲ್ಲಿ ತಿಳಿಸಿದರು. ಸದ್ಯ 110 ಕೆ.ವಿ. ಘಟಕದಲ್ಲಿ 73 ಟವರಲ್ಲಿ 66 ಟವರ ಆಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ತಿಳಿಸಿದರು.
ಸಾರಿಗೆ –
ಸಾರಿಗೆ ಇಲಾಖೆ ಸಮಸ್ಯೆಗಳ ಕುರಿತು ಮಾತನಾಡುತ್ತಾ ರಾಜಕಾರಣಿಗಳು, ಅಧಿಕಾರಿಗಳು ಸುದ್ದಿಗೋಷ್ಠಿ ಮಾಡುವುದನ್ನು ಕೇಳಿದ್ದೇನೆ ಆದರೆ ಮಾಧ್ಯಮದ ಸಂಪಾದಕರೇ ಸುದ್ದಿಗೋಷ್ಟಿ ನಡೆಸಿರುವ ವಿದ್ಯಮಾನ ಭಟ್ಕಳದಲ್ಲೇ ನಡೆದಿದೆ ಎಂದು ಸಚಿವರು ಇತ್ತೀಚಿಗೆ ಅನಂತಮೂರ್ತಿ ಹೆಗಡೆ ನಡೆಸಿದ ಮಾಧ್ಯಮ ಗೋಷ್ಟಿ ವಿಚಾರವನ್ನಿಟ್ಟುಕೊಂಡು ವ್ಯಂಗ್ಯ ಮಾಡಿದರು.
ಭಟ್ಕಳದ ಗ್ರಾಮೀಣ ಭಾಗದಲ್ಲಿ ಹೊಸ ಬಸ್ ಮಾರ್ಗದ ಬಗ್ಗೆ ಒಂದು ಭೇಟಿ ನೀಡಿ ತಾಲುಕು ಸರ್ವೇ ಮಾಡಿ ಬರುವಂತೆ ಡಿಪೋ ಮ್ಯಾನೇಜರ ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜು ನಾಯ್ಕ ಮಾತನಾಡಿ ನಮ್ಮ ಭಾಗದಲ್ಲಿ ಎಲೆಚುಕ್ಕಿ ರೋಗದ ಸಮಸ್ಯೆ ಇದೆ. ಅಡಿಕೆ ಬೆಳೆ ಇನ್ನು ಸ್ವಲ್ಪ ವರ್ಷದಲ್ಲಿ ಸಂಪೂರ್ಣ ನಶಿಸ ಹೋಗಲಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ರೈತರುಗಳನ್ನು ಭೇಟಿ ಮಾಡಿ ಪ್ರಾತಕ್ಷಿತೆ ನೀಡಬೇಕು. ಕಾಮ್ಪಫೋಸ್ಟ ಗೊಬ್ಬರ ನೀಡಬೇಕು ಎಂದು ಬೇಡಿಕೆಯಿಟ್ಟರು.
ಇದಕ್ಕೆ ಸಚಿವ ಮಂಕಾಳ ರೈತರೊಂದಿಗೆ ಜಾಗ್ರತಿ ಸಭೆ ಮಾಡಬೇಕು ಮತ್ತು ಅಡಿಕೆ ರೋಗದ ನಿವಾರಣೆಗೆ ಕಂಡು ಹಿಡಿದ ಔಷಧಿ ನಮ್ಮ ಜಿಲ್ಲೆಗೆ ಯಾಕೆ ಬಂದಿಲ್ಲ ಈ ಬಗ್ಗೆ ಮಾಹಿತಿ ಕೇಳಿದರು.
ಹಣ್ಣು ಹಂಪಲು ಗಿಡಗಳನ್ನು ಬೆಳೆಸಲಾಗುತ್ತದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದು ಇದಕ್ಕೆ ಸಚಿವರು ಹಣ್ಣು ಹಂಪಲು ಗಿಡಗಳನ್ನು ಹೆಚ್ಚು ಪ್ರಮಾಣದಲ್ಲಿ ಕಾಡಿನ ಮದ್ಯದಲ್ಲಿ ನೆಡುವ ಪ್ರಯತ್ನ ಮಾಡಿ ಆ ಮೂಲಕ ಕಾಡು ಪ್ರಾಣಿಗಳು ನಾಡಿನ ಮೇಲೆ ದಾಳಿ ಮಾಡದಂತೆ ನಿಯಂತ್ರಣಕ್ಕೆ ಸಚಿವ ವೈದ್ಯ ಅವರು ತಿಳಿಸಿದರು.
ವಿವಿಧ ಇಲಾಖೆಗಳ ಹೆಸರನಲ್ಲಿ ಕರೆ ಮಾಡಿ ಕಾರ್ಮಿಕ ಕಾರ್ಡ್ ರದ್ದುಪಡಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಚಿವರು ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಕೂಡಲೇ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವಂತೆ ಪೋಲಿಸ ಇಲಾಖೆಗೆ ಆದೇಶ ನೀಡಿದರು.
“ಸಾಮಾಜಿಕ ಜಾಲತಾಣದ ನಕಲಿ ಖಾತೆ ಬಗ್ಗೆ ಸಚಿವರು ಗರಂ”
“ಭಟ್ಕಳಕ್ಕೆ ಬದಲಾವಣೆ” ನಕಲಿ ಖಾತೆ ಮಾಡಿದವರಿಗೆ ಅಪ್ಪನ ಬಗ್ಗೆ ಗೊತ್ತಿಲ್ಲದವರು. ಕ್ಷೇತ್ರದಲ್ಲಿ ಹಡಬೆ ಕೆಲಸ ಮಾಡುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೋಲೀಸ್ ಇಲಾಖೆಯಿಂದ ನಕಲಿ ಖಾತೆ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಒಂದು ನಕಲಿ ಖಾತೆ ಪತ್ತೆಯಾಗಿದೆ. ಅವರ ಅಪ್ಪನ ಹೆಸರು ಹಾಕಿ ಇಂತವರೇ ನಮ್ಮ ಅಪ್ಪ ಎಂದು ಹಾಕಿ ಖಾತೆ ರಚಿಸಿ ಎಂದು ನಕಲಿ ಖಾತೆದಾರರ ಮೇಲೆ ಸಚಿವ ಮಂಕಾಳ ವೈದ್ಯ ವಾಗ್ದಾಳಿ ನಡೆಸಿದರು. ಒಂದು ಹಂತಕ್ಕೆ ಸಂಯಮ ಕಳೆದುಕೊಂಡಿದ್ದ ಸಚಿವರು ಕುಪಿತರಾದರು.
ಸಭೆಯಲ್ಲಿ ಭಟ್ಕಳ ಉಪವಿಭಾಗದ ಪ್ರಭಾರಿ ಸಹಾಯಕ ಆಯುಕ್ತ ಪ್ರವೀಣ ಕರಾಂಡೆ, ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಪಂಚಾಯತ ಆಡಳಿತಾಧಿಕಾರಿ ಶ್ರೀಮತಿ ಶಿವಕ್ಕ ಎಮ್., ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಎಂ, ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
