ಭಟ್ಕಳ:ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಚತುಸ್ಪದ ಕಾಮಗಾರಿಯು ಮಂದಗತಿಗೆ ಜಾರಿದಂತಿದೆ ಭಟ್ಕಳದಲ್ಲಿ ರಂಗಿ ಕಟ್ಟೆ ಸೇರಿದಂತೆ ತಾಲೂಕಿನ ಕೆಲವೆಡೆ ಮರ ಕಡಿತದ ಕೆಲಸ ಆಗಿರುವುದು ಬಿಟ್ಟರೆ ಹೆದ್ದಾರಿ ಉದ್ದಕ್ಕೂ ನಡೆಯುತ್ತಿರುವ ಕಾಮಗಾರಿ ಅಷ್ಟಕಷ್ಟೇ ಆಗಿದೆ. ಭಾರಿ ಹಾಗೂ ಅಸಮರ್ಪಕ ಸಂಚಾರದ ಒತ್ತಡದಿಂದಾಗಿ ಕಳೆದ ಒಂದೇ ತಿಂಗಳಲ್ಲಿ ನಡೆದ ಅಪಘಾತಗಳಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿನಿತ್ಯವೂ ವಾಹನ ಸಂಚಾರರು ಜಾರಿ ಬೀಳುವುದು ಗಂಭೀರವಾಗಿ ಗಾಯಗೊಳ್ಳುವುದು, ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ.
ಜಿಲ್ಲಾಧಿಕಾರಿಗಳು ಮುಂದಿನ ಎರಡು ತಿಂಗಳಲ್ಲಿ ಚತುಸ್ಪದ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ನೀಡಿ ಎರಡು ವಾರಗಳು ಕಳೆದರೂ ಈ ನಡುವೆ ಅಪೂರ್ಣ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಕ್ರಮಗಳು ಎಲ್ಲೂ ಕಾಣಿಸುತ್ತಿಲ್ಲ.

ಈಗಾಗಲೇ ಫೆಬ್ರವರಿ ಮೊದಲ ವಾರ ಮುಗಿದಿದ್ದು ಇನ್ನು ಮೂರೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಹೆದ್ದಾರಿ ಎರಡು ಬದಿಗಳಲ್ಲಿ ನೀರು ಹರಿವಿನ ವ್ಯವಸ್ಥೆಗಳ ಕುರಿತು ಯಾವುದೇ ಸಿದ್ಧತೆಗಳು ಕಾಣುತ್ತಿಲ್ಲ ನಗರದ ವ್ಯಾಪ್ತಿಯಲ್ಲಿ ಹೆದ್ದಾರಿ ವಿಸ್ತರಣೆ ಯಾವ ಮಾದರಿಯಲ್ಲಿ ನಡೆಯಲಿದೆ ಎಂಬುದರ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ.

ನಗರದ ಸಂಶುದ್ದೀನ್ ಸರ್ಕಲ್ ದಿಂದ ಕ್ವಾಲಿಟಿ ಹೋಟೆಲ್ ವರೆಗಿನ ಪ್ರದೇಶದಲ್ಲಿ ದಟ್ಟನೆಯ ಸಂಚಾರ ಉಂಟಾಗುತ್ತದೆ ಪಾದಾಚಾರಗಳಿಗೆ ರಸ್ತೆ ದಾಟುವುದೇ ಒಂದು ಸಾಹಸದ ಕೆಲಸವಾಗಿದೆ ಭಟ್ಕಳದಲ್ಲಿ ಸರ್ವಿಸ್ ರಸ್ತೆ ಯೋಜನೆ ಇದೆಯೇ ಅಥವಾ ಇಲ್ಲವೇ? ಒಂದೊಮ್ಮೆ ಸರ್ವಿಸ್ ರಸ್ತೆ ಇಲ್ಲದೆ ಹೆದ್ದಾರಿ ರಸ್ತೆ ವಿಸ್ತರಣೆ ಮುಂದುವರೆದರೆ ಸಾರ್ವಜನಿಕರ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ಚತುಸ್ಪದಕ್ಕೆ ವಿಸ್ತರಿಸುವ ಕಾಮಗಾರಿ ಆರಂಭವಾಗಿ ಇಂದಿಗೆ ಸರಿಸುಮಾರು 13 ವರ್ಷಗಳು ಕಳೆದಿವೆ.

ಈಗಲಾದರೂ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಸಮರ್ಪಕ ಒತ್ತಡ ಹೇರದೆ ಹೋದರೆ ಭಟ್ಕಳ ತಾಲೂಕಿನಲ್ಲಿ ಹೆದ್ದಾರಿ ಕಾಮಗಾರಿ ಕೇವಲ ಅಭಿವೃದ್ಧಿಯ ಕನಸಾಗಿಯೇ ಉಳಿದು ಜನರ ಜೀವನದೊಂದಿಗೆ ಅಪಾಯವನ್ನು ಉಂಟುಮಾಡಲಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
