ಭಟ್ಕಳ: ಭಟ್ಕಳ ತಾಲೂಕಿನ ಆಸರಕೇರಿ ಜಂಬೂರಮಠದ ಕೇರೆಯಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವಿಗೀಡಾದ ಬಾಲಕನನ್ನು ಶಶಿಧರ್ ಯೋಗೇಶ್ ಮೊಗೇರ್ (15) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಶಶಿಧರ್ ಮಧ್ಯಾಹ್ನದ ವೇಳೆ ಶಾಲೆಯಿಂದ ಗೆಳೆಯರೊಂದಿಗೆ ಕೇರೆಯ ಬಳಿ ಮೀನು ಹಿಡಿಯಲು ತೆರಳಿದ್ದನು.ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಶಶಿಧರ್ ಮುಳುಗಿ ಮೃತಪಟ್ಟಿದ್ದಾನೆ. ಘಟನೆ ಕುರಿತು ಮೃತ ಬಾಲಕನ ಅಣ್ಣ ಬಾಲಾಜಿ ಯೋಗೇಶ್ ಮೊಗೇರ್ ಭಟ್ಕಳ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯಲ್ಲಿ ಯಾವುದೇ ಸಂಶಯಾಸ್ಪದ ಅಂಶಗಳಿಲ್ಲ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಹೇಶ್ ಕೆ. ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
