ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಾತ್ಕಾಲಿಕ ಲಿಫ್ಟ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರ ದಾರುಣ ಸಾವು

Share


ಭಟ್ಕಳ: ಭಟ್ಕಳ ತಾಲೂಕಿನ ಮುರುಡೇಶ್ವರದ ಕಾಮತ್ ಯಾತ್ರಿ ನಿವಾಸ್ ಕಟ್ಟಡದ ಕಾಮಗಾರಿಯ ವೇಳೆ ಅಳವಡಿಸಲಾಗಿದ್ದ ತಾತ್ಕಾಲಿಕ ಮಿನಿ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುರುಡೇಶ್ವರ ಸಾಕೇನ ಬೆಕ್ಕಿನ ಕೆರೆ, ದೇವಿಕಾನ ಕಾಯ್ಕಿಣಿಯ ಪ್ರಭಾಕರ್ ಮುತ್ತಯ್ಯ ಶೆಟ್ಟಿ (60)ಮತ್ತು ಕುಂದಾಪುರ ತಾಲೂಕಿನ ಗೋಳಿಹೊಳೆಯ ಬಾಬಣ್ಣ ಪೂಜಾರಿ(55) ಮೃತಪಟ್ಟ ದುರ್ದೈವಿ ಗಳಾಗಿದ್ದಾರೆ.
ಈ ದುರಂತಕ್ಕೆ ಸುರಕ್ಷತಾ ಕ್ರಮಗಳ ಕೊರತೆಯೇ ಕಾರಣ ಎಂದು ಮೃತಪಟ್ಟವರ ಕುಟುಂಬಸ್ಥರು ಆರೋಪಿಸಿದ್ದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.


ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ ಕಾಮತ್ ಯಾತ್ರಿ ನಿವಾಸದ ಮಾಲಿಕತ್ವದ ವೆಂಕಟ್ ದಾಸ್ ಕಾಮತ್ ಅವರ ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡದಲ್ಲಿ ಮಿನಿ ಲಿಫ್ಟ್ ದುರಸ್ತಿ ಕಾರ್ಯ ನಡೆಯುತ್ತಿದ್ದು ಕಟ್ಟಡದ ಮೇಲ್ಮಹಡಿಗಳಿಗೆ ಸಾಮಗ್ರಿಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ತಾತ್ಕಾಲಿಕ ಲಿಫ್ಟಿನ ಸೇಫ್ಟಿ ಲಾಕ್ ಹಾಳಾಗಿತ್ತು ಹಾಗೂ ಅದರ ಕೇಬಲ್ ಸಹ ಕಟ್ ಆಗಿದ್ದು ದುರಸ್ತಿ ಕಾರ್ಯದ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಲಿಫ್ಟಿನಲ್ಲಿದ್ದಾಗ ಅದು ಅನಿರೀಕ್ಷಿತವಾಗಿ ಕೆಳಕ್ಕೆ ಕುಸಿದು ನೆಲಕ್ಕೆ ಉರುಳಿದೆ.
ಅತಿ ವೇಗದಲ್ಲಿ ಮಿನಿ ಲಿಫ್ಟ್ ಕೆಳಕ್ಕೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು ತಕ್ಷಣವೇ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾಸ್ಪತ್ರೆಗೆ ಸ್ಥಳಾಂತರಿಸಲಾಯಿತು ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.


ಈ ಘಟನೆಯು ತೀವ್ರ ಆಘಾತ ಮತ್ತು ಶೋಕಕ್ಕೆ ಕಾರಣವಾಗಿದೆ.
ಮುರುಡೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮೃತ ಪ್ರಭಾಕರ್ ಶೆಟ್ಟಿ ಅವರ ಪುತ್ರ ಶ್ರವಣ್ ಶೆಟ್ಟಿ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಈ ಅವಘಡಕ್ಕೆ ಸುರಕ್ಷತಾ ಕ್ರಮಗಳ ಕೊರತೆ ಹಾಗೂ ಯಂತ್ರೋಪಕರಣಗಳ ದೋಷವೇ ಕಾರಣ” ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕನ್ಸ್ಟ್ರಕ್ಷನ್ ಮಿನಿ ಲಿಫ್ಟ್ ತಯಾರಿಕಾ ಸಂಸ್ಥೆ ಮತ್ತು ಕಟ್ಟಡ ಮಾಲೀಕರಾದ ವೆಂಕಟ ದಾಸ ಕಾಮತ್ ಅವರ ವಿರುದ್ಧ ದೂರು ದಾಖಲಾಗಿದೆ.
ಮುರುಡೇಶ್ವರ ಠಾಣೆ ಪಿ.ಎಸ್.ಐ ಹನುಮಂತ ಬಿರಾದಾರ್ ಪ್ರಕರಣ ದಾಖಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!