ಭಟ್ಕಳ – ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025ಕ್ಕೆ ಬರಹಗಾರ ಲೇಖಕ ,ಸ್ವರ ಸಂಯೋಜಕ ಗಾಯಕ ಉಮೇಶ ಮುಂಡಳ್ಳಿ ಆಯ್ಕೆಯಾಗಿದ್ದಾರೆ.
ಮುಂಡಳ್ಳಿ ಅವರ ಸುದೀರ್ಘ ಸಾಹಿತ್ಯ ಸಂಗೀತ ಸೇವೆಯನ್ನು ಪರಿಗಣಿಸಿದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ ದಾಂಡೇಲಿ ಹಾಗೂ ಸಾಹಿತ್ಯ ಸಂಚಲನ ಶಿರಸಿ ಇವರು ಸಹಯೋಗದೊಂದಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಉಮೇಶ ಮುಂಡಳ್ಳಿ ಅವರ ಹೆಸರನ್ನು ಘೋಷಣೆ ಮಾಡಿದೆ.
ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಮತ್ತು ಸಂಗೀತ ಸೇವೆಯನ್ನು ಜೊತೆಜೊತೆಗೆ ನಡೆಸಿಕೊಂಡು ಬರುತ್ತಿರುವ ಮುಂಡಳ್ಳಿ ಅವರು ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು,ನಾನೂ ಶಿಲ್ಪವಾಗಬೇಕು, ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು, ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ ಕನ್ನಡಕ್ಕೆ ಒಂದು ಸುತ್ತು ಪ್ರವಾಸಿ ಲೇಖನ, ಮಾತಾ ಮಹಿಮಾ ಹಾಗೂ ಹನುಮಾಮೃತ ಎನ್ನುವ ಭಕ್ತಿ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದು, ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅನೇಕ ಮೌಲ್ಯಭರಿತ ಲೇಖನಗಳನ್ನು ಬರೆಯುತ್ತಾ ಬರುತ್ತಿದ್ದಾರೆ.
ಸಂಗೀತ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮುಂಡಳ್ಳಿಯವರು ಜಿಲ್ಲೆ ಹೊರಜಿಲ್ಲೆ ಹಾಗೂ ಗಡಿ ರಾಜ್ಯಗಳಲ್ಲೂ ಭಕ್ತಿ ಸಂಗೀತ, ಸುಗಮ ಸಂಗೀತ ಕಾರ್ಯಕ್ರಮ ನೀಡುವುದರೊಂದಿಗೆ ತಮ್ಮದೇ ಸ್ವರಚಿತ ಭಾವಗೀತೆ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಗಳ ಜೊತೆ ರಾಜ್ಯದ ಅನೇಕ ಹಿರಿ ಹಿರಿಯ ಕವಿಗಳ ಕವಿತೆಗಳೂ ಸೇರಿದಂತೆ ಇದುವರೆಗೆ ಸುಮಾರು ಮೂವತ್ತೈದಕ್ಕೂ ಹೆಚ್ಚಿನ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಾವು ಹಾಡುವುದರ ಜೊತೆಗೆ ಇತರೆ ಗಾಯಕರಿಗೂ ಅವಕಾಶ ನೀಡಿದ್ದಾರೆ. ಭರವಸೆಯ ಛಾಯೆ, ಮುಂಡಳ್ಳಿ ಭಕ್ತಿ ಗಾನ ಮಾಲಾ, ಶ್ರೀ ಕಂಚಿನ ದುರ್ಗಾಪರಮೇಶ್ವರಿ ಹಾಗೂ ಶ್ರೀ ಯಕ್ಷ ಚೌಡೇಶ್ವರಿ ಭಕ್ತಿಗೀತೆಗಳು, ಅಯೋಧ್ಯಾ ಶ್ರೀ ರಾಮನ ಭಕ್ತಿಗೀತೆ ಗಳು ಇವರ ಸಂಯೋಜನೆಯ ಜನಪ್ರಿಯ ಧ್ವನಿಮುದ್ರಿಕೆಗಳು. ಇವರ “ಭರವಸೆಯ ಛಾಯೆ” ಮೊದಲ ಧ್ವನಿಮುದ್ರಣವನ್ನು 2011 ರಲ್ಲಿ ಹಿರಿಯ ಸಾಹಿತಿ ಪಾಟಿಲ್ ಪುಟ್ಟಪ್ಪನರು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ.
ಮುಂಡಳ್ಳಿ ಯವರಿಗೆ ಇದುವರೆಗೆ ಅನೇಕ ಪ್ರಶಸ್ತಿ ಗಳು ಲಭಿಸಿದ್ದು, ತಾಲೂಕು ಆಡಳಿತ ವತಿಯಿಂದ 2011 ರ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ ಯುವಜನ ಸೇವಾ ಇಲಾಖೆ ಕೊಡಮಾಡುವ ಪ್ರತಿಷ್ಠಿತ ಯುವ ಪ್ರಶಸ್ತಿ, ಗೋವಾ ಕನ್ನಡ ಸಂಘದ ನ್ಯಾಶನಲ್ ಐಕಾನ್ ಅವಾರ್ಡ್, ರವೀಂದ್ರ ರತ್ನ ಪುರಸ್ಕಾರ , ಚಿತ್ರಸಂತೆ ವರ್ಷದ ಕನ್ನಡಿಗ ಕರ್ನಾಟಕ ಅಚಿವರ್ಸ್ ಅವಾರ್ಡ್ , ಕಲಾರತ್ನ ಲೋಕೇಶ್ ಅವಾರ್ಡ್ ಹೀಗೆ ಹತ್ತಾರು ಪ್ರಶಸ್ತಿ ಗಳು ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.
ಉಮೇಶ ಮುಂಡಳ್ಳಿ ಅವರಿಗೆ 2025 ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
