ಭಟ್ಕಳ: ಶಹರ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳ ವತಿಯಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಜನಜಾಗೃತಿ ರ‍್ಯಾಲಿ ಹಾಗೂ ಕಾರ್ಯಗಾರವನ್ನು ಭಟ್ಕಳ ತಹಸಿಲ್ದಾರ್ ನಾಗೇಂದ್ರ ಕೋಳ ಶೆಟ್ಟಿ ಚಾಲನೆ ನೀಡಿದರು.

ವರ್ಷಂ ಪ್ರತಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲಿದ್ದು ಪ್ರತಿಯೊಬ್ಬರು ತಮ್ಮ ಅಮೂಲ್ಯ ಜೀವ ಹಾಗೂ ಜೀವನದ ಮೌಲ್ಯ ತಿಳಿದುಕೊಂಡು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು ಎಂದು ಕರೆ ನೀಡಿದ ಅವರು ಪೊಲೀಸರು ಹಿಡಿದು ಬೈಕ ನಿಲ್ಲಿಸಿ ದಂಡ ವಿಧಿಸುವುದಕ್ಕಿಂತ ಮೊದಲೇ ಸಾರ್ವಜನಿಕರಾದ ತಾವುಗಳು ಸ್ವಯಂ ಪ್ರೇರಿತರಾಗಿ ನಿಯಮ ಪಾಲನೆ ಮಾಡಿದರೆ ಕಾನೂನು ಸುವ್ಯವಸ್ಥೆ ಮತ್ತು ತಾವುಗಳು ಹಾಗೂ ಸಮಾಜವೂ ಕೂಡ ಸುರಕ್ಷಿತವಾಗಿರುತ್ತದೆ. ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದಿರುವವರನ್ನು ನಿಲ್ಲಿಸಿ ಅವರಿಗೆ ತಿಳಿ ಹೇಳಿ ಎಚ್ಚರಿಸುವುದು ಈಗಿನ ಯುವ ಪೀಳಿಗೆಯ ಕರ್ತವ್ಯವಾಗಿದೆ ಎಂದು ಹೇಳಿದರು.

ಡಿವೈಎಸ್ಪಿ ಮಹೇಶ್ ಎಂ. ಕೆ ಮಾತನಾಡಿ, ಹೆಲ್ಮೆಟ್ ಧರಿಸಿದವರನ್ನು ತಡೆಹಿಡಿದು ನಿಲ್ಲಿಸಿ ದಂಡ ಹಾಕುವುದು ಪೊಲೀಸರ ಉದ್ದೇಶವಲ್ಲ ಜನರ ಜೀವ ಅಮೂಲ್ಯವಾದದ್ದು ಆ ಜೀವ ಉಳಿಯಲಿ ಎಂಬ ಸದ್ದುದ್ದೇಶ ನಮ್ಮದು ಹಾಗೂ ಅ ಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡುವ ಪಾಲಕರಿಗೂ ದಂಡ ವಿಧಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಸಹರ ಠಾಣೆಯ ಸಿ.ಪಿ.ಐಯಾದ ದಿವಾಕರ್ ಅವರು ಮಾತನಾಡಿ ಅಪಘಾತವಾದಾಗ ಕೈಕಾಲುಗಳಿಗೆ ಗಾಯವಾದರೆ ಉಳಿಯುವ ಸಾಧ್ಯತೆ ಇದೆ ಆದರೆ ತಲೆಗೆ ಪೆಟ್ಟು ಬಿದ್ದರೆ ಜೀವ ಉಳಿಸಿಕೊಳ್ಳುವುದು ತುಂಬಾ ಕಷ್ಟಕರ ಆದುದರಿಂದ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿದರು.

ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಮಾತನಾಡಿ ದ್ವಿಚಕ್ರ ವಾಹನಗಳ ಇಲ್ಲಿಯವರೆಗೆ ನಡೆದ ಅಪಘಾತಗಳಲ್ಲಿ ಹೆಚ್ಚಿನವರು ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿರುವುದು ಕಂಡು ಬಂದಿದ್ದು ನಿಮ್ಮ ಜೀವಕ್ಕಾಗಿ ಹಾಗೂ ನಿಮ್ಮನ್ನು ನಂಬಿಕೊಂಡು ಇರುವವರ ಸಲುವಾಗಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂದು ಹೇಳಿದರು.
ನಂತರ ಅಧಿಕಾರಿಗಳು ನಗರದ ವಿವಿಧ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಸವಾರರಿಗೆ ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ ಗಳಾದ ತಿಮ್ಮಪ್ಪ ಮೊಗೆರ, ನವೀನ್ ನಾಯ್ಕ್, ಭರಮಪ್ಪ ಬೆಳಗಲಿ, ರನ್ನ ಗೌಡ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.