ಭಟ್ಕಳ: ಹಳೇ ಬಸ್ ನಿಲ್ದಾಣದ ರಾಜಾಂಗಣ ಮೀನು ಮಾರುಕಟ್ಟೆಯ ಬಗ್ಗೆ ಸ್ವಚ್ಛತೆ ಹೆಸರಿನಲ್ಲಿ ಅಪಪ್ರಚಾರ ಹಾಗೂ ಶಾಂತಿ ಭಂಗ ಮಾಡುವ ದುರುದ್ದೇಶದಿಂದ ಕಸ ತಂದು ಹಾಕಿರುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರದಂದು ಭಟ್ಕಳ ತಾಲ್ಲೂಕು ಮೀನುಗಾರರು ಮತ್ತು ಮೀನು ಮಾರಾಟಗಾರರ ಸಂಘದಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೆಪ್ಟೆಂಬರ್ 01 ರಿಂದ ಸಂತೆ ಮಾರುಕಟ್ಟೆಯಲ್ಲಿರುವ ಹೊಸ ಮೀನು ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಕೆಲವು ಖಾಸಗಿ ವ್ಯಕ್ತಿಗಳು ಸ್ವಚ್ಛತೆ ಹೆಸರಿನಲ್ಲಿ ಹಳೆ ಬಸ್ ನಿಲ್ದಾಣದಲ್ಲಿನ ರಾಜಾಂಗಣದ ಪುರಾತನ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯ ಬಗ್ಗೆ ಸ್ವಚ್ಛತೆಯ ಹೆಸರಿನಲ್ಲಿ ಅಪಪ್ರಚಾರ ಈ ವಿಷಯವನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದು ಸಹ ಇರುತ್ತದೆ.

ಸೆಪ್ಟೆಂಬರ್ 15 ಸೋಮವಾರದಂದು ಕೆಲವು ಕಿಡಿಗೇಡಿಗಳು ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯ ಸ್ವಚ್ಛತೆಗೆ ಹಾಗೂ ಶಾಂತಿಗೆ ಧಕ್ಕೆ ತರುವ ದುರುದ್ದೇಶದಿಂದ ಕಸದ ರಾಶಿಯನ್ನು ಮೀನು ಮಾರುವ ಸ್ಥಳದಲ್ಲಿ ಹಾಕಿದ್ದಾರೆ.
ಈ ಕುರಿತು ಮೀನು ಮಾರಾಟಗಾರರ ಸಂಘದಿಂದ ತೀವ್ರವಾಗಿ ಖಂಡಿಸಿದ್ದೇವೆ.
ಕಳೆದ ನೂರಾರು ವರ್ಷಗಳಿಂದ ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯಲ್ಲಿ ಯಾವುದೇ ಪಕ್ಷಬೇಧ, ಧರ್ಮಬೇಧವಿಲ್ಲದೆ ಸೌಹಾರ್ಧತೆಯಿಂದ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿದ್ದು, , ಈ ಕೃತ್ಯದ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ಪತ್ತೆಹಚ್ಚಲು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪುರಸಭೆ ಮುಖ್ಯಾಧಿಕಾರಿಗಳು ಸೂಕ್ತ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಈ ವಿಷಯದ ಗಂಭೀರತೆ ಅರಿತಿಯೂ ನಿರ್ಲಕ್ಷ್ಯ ಧೋರಣೆ ತೋರುವ ಮೂಲಕ ಪುರಸಭೆ ಮುಖ್ಯಾಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಂಘದ ವತಿಯಿಂದ ಪ್ರಕರಣ ದಾಖಲಿಸಬೇಕಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಮನವಿಯನ್ನು ಪ್ರ. ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೂರಾರು ಮಹಿಳಾ ಮೀನು ಮಾರಾಟಗಾರರು, ಸಂಘದ ಮೀನು ಮಾರಾಟಗಾರ ಸದಸ್ಯರು ಇದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.