
ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಮಣ್ಣ, ಶಶಿಹಿತ್ಲು ಭಾಗದ ಜನರಿಗೆ ನೀರು ಪೂರೈಕೆಗೆ ತಡೆಯೋಡ್ಡಿರುವುದಕ್ಕೆ ಆಕ್ರೋಶಗೊಂಡ ಅಲ್ಲಿನ ಗ್ರಾಮಸ್ಥರು ಮಂಗಳವಾರ ಸಂಜೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಂಗ್ರೆ,ಉಳ್ಮಣ್, ಶಶಿಹಿತ್ಲು ಭಾಗದ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಇಲ್ಲಿನ ಬೆಂಗ್ರೆ ಮಾವಿನ ತೋಳು ಪ್ರದೇಶದ ಮಾಲ್ಕಿ ಜಮೀನಿನಲ್ಲಿ 1996ರಲ್ಲಿ ಸರಕಾರದಿಂದ ಬಾವಿ ನಿರ್ಮಿಸಿ ಕೊಳವೆ ಅಳವಡಿಸಲಾಗಿದೆ. ಹಲವಾರು ಬಾರಿ ಪಂಚಾಯತ್ ವತಿಯಿಂದ ದುರಸ್ತಿ ಕಾರ್ಯ ಮಾಡಲಾಗಿದೆ ಅಲ್ಲಿಂದ ಇಲ್ಲಿಯವರೆಗೆ ಸರಿಸುಮಾರು 150 ಮನೆಗಳಿಗೆ ಇದೇ ಬಾವಿಯಿಂದ ನಿತ್ಯ ನೀರನ್ನು ಪೂರೈಸಲಾಗುತ್ತಿದ್ದು, ಇದೀಗ ಏಕಾಏಕಿ ನಿವೇಶನದ ಮಾಲೀಕರು ನೀರು ಹರಿಸಲು ತಡೆಯೋಡುತ್ತಿದ್ದಾರೆ. ಇದರಿಂದ ಜನರು ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಸರಕಾರದಿಂದ ತೋಡಿದ ಬಾವಿಯ ನೀರನ್ನು ಜನರಿಗೆ ನೀಡುವುದಕ್ಕೆ ತಡೆಯಲು ಅವಕಾಶ ನೀಡಿದವರು ಯಾರು ಎಂದು ಇದಕ್ಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಬೆಂಗ್ರೆಗ್ರಾಮ ಪಂಚಾಯತ್ ಅಧ್ಯಕ್ಷೇ ಪ್ರಮೀಳಾ ಡಿಕೋಸ್ತ, ಉಪಾಧ್ಯಕ್ಷ ಗೋವಿಂದ ನಾಯ್ಕ್ ,ಪಿಡಿಓ ಉದಯ್ ಬೋರ್ಕರ್, ಸದಸ್ಯರಾದ ಮೇಘನಾ ಕಾಮತ್, ಶಿವರಾಮ ದೇವಾಡಿಗ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಪಂಚಾಯತ್ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿಭಟನಾಕಾರರಿಗೆ ವಿವರಿಸಿದರು.
ಆದರೆ ಇದಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ನೀರುಹರಿಸಲು ವ್ಯವಸ್ಥೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ತಾಲೂಕ ಪಂಚಾಯತ್ ಮಾಜಿ ಸದಸ್ಯ ವಿಷ್ಣುದೇವಾಡಿಗ, ಪ್ರಮುಖರಾದ ದಾಸ ದೇವಾಡಿಗ, ಯಶವಂತ ದೇವಾಡಿಗ, ಮೋಹನ್ ದೇವಾಡಿಗ, ಭಾಸ್ಕರ್ ದೇವಾಡಿಗ, ರಾಜೇಶ್ವರಿ ದೇವಾಡಿಗ, ಮುಕ್ತದೇವಾಡಿಗ, ಸಾವಿತ್ರಿ ದೇವಾಡಿಗ ಲಕ್ಷ್ಮೀದೇವಾಡಿಗ, ಯಮುನಾ ದೇವಾಡಿಗ, ನಿರ್ಮಲಾ ದೇವಾಡಿಗ, ಸರಸ್ವತಿ ದೇವಾಡಿಗ, ಮಾಲತಿ ದೇವಾಡಿಗ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಕಚೇರಿಯ ಮುಂದೆ ಪ್ರತಿಭಟನೆ ಮುಂದುವರೆದ ಹಿನ್ನೆಲೆ ತಹಶೀಲ್ದಾರ್ ನಾಗೇಂದ್ರ ಕೋಳ ಶೆಟ್ಟಿ ಸಿಬ್ಬಂದಿಯೊಡನೆ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ನಂತರ ಅಲ್ಲಿಂದ ಬಾವಿ ಇರುವ ಮಾವಿನ ತೋಳು ಪ್ರದೇಶಕ್ಕೆ ತೆರಳಿ ಜಾಗದ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಅಲ್ಲಿಂದ ಪಂಚಾಯತ್ ಕಚೇರಿಗೆ ವಾಪಸಾಗಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು ಇನ್ನೂ ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಅಲ್ಲಿಯವರೆಗೆ ಶಾಂತಿ ಕಾಪಾಡಿಕೊಳ್ಳುವಂತೆ ವಿನಂತಿಸಿಕೊಂಡರು.
ಮುಡೇಶ್ವರ ಠಾಣಾ ಎಸ್ಐ ಲೋಕನಾಥ್ ರಾಥೋಡ್ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.