ಭಟ್ಕಳ: ದುಬೈ ನಲ್ಲಿ ಸೆಪ್ಟಂಬರ 7 ಮತ್ತು 8 ರಂದು ನಡೆಯುತ್ತಿರುವ ಅಂತರಾಷ್ಟ್ರೀಯ ಜನಪದ ಉತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಹಾಡುವಳ್ಳಿಯ ಗೊಂಡರ ಶ್ರೀ ದುರ್ಗಾ ಡಕ್ಕೆ ಕುಣಿತ ತಂಡವನ್ನು ತಾಲೂಕು ಆಡಳಿತದ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿಯವರು ತಂಡದ ಪರವಾಗಿ ಹಿರಿಯರಾದ ಸೋಮಯ್ಯ ಗೋಂಡ ರನ್ನು ಸನ್ಮಾನಿಸಿ ತಂಡದ ಪ್ರತಿಯೋರ್ವ ಕಲಾವಿದರಿಗೂ ಹೂಗುಚ್ಛ ನೀಡಿ ಅಭಿನಂದಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಗೊಂಡರ ಕ್ಷೇಮಾಬಿವೃದ್ದಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಗೊಂಡ ಮಾತನಾಡಿ ನಮ್ಮ ಸಮುದಾಯದ ಡಕ್ಕೆ ಕುಣಿತ ತಂಡ ಇದೇ ಮೊದಲ ಬಾರಿ ತಮ್ಮ ಕಲಾ ಪ್ರದರ್ಶನಕ್ಕಾಗಿ ವಿದೇಶಕ್ಕೆ ಹೊರಟು ನಿಂತಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಈ ವಿಷಯವನ್ನು ಮಾನ್ಯ ಉಸ್ತುವಾರಿ ಸಚಿವರಲ್ಲಿ ತಿಳಿಸಿದಾಗ ಸಂಪೂರ್ಣ ಪ್ರಯಾಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಇದು ಅವರು ನಮ್ಮ ಸಮಾಜದ ಮೇಲಿಟ್ಟ ಗೌರವವನ್ನು ಸೂಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಶ್ರೀಮತಿ ರಜನಿ ದೇವಾಡಿಗ, ಆರ್.ಐ. ವಿಶ್ವನಾಥ ಗಾವಂಕರ, ಉದಯ ತಳವಾರ, ಸುನೀಲ್ ಕಚರೇಕರ ರವಿಕಾಂತ ಮಾರುತಿ ಗೊಂಡ, ಡಕ್ಕೆ ಕುಣಿತ ತಂಡದ ನಾಗರಾಜ ಗೊಂಡ, ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.